ಬಾಲಿವುಡ್ ನಟಿ ಕೃತಿ ಸನೋನ್ ನಟನೆಯ ಜತೆಗೆ ನೃತ್ಯದ ಮೂಲಕವೂ ಸುದ್ದಿ ಮಾಡಿದ್ದಾರೆ. ‘ಮಿಮಿ’ ಚಿತ್ರದ ‘ಪರಮ ಸುಂದರಿ..’ ಹಾಡಿನಲ್ಲಿ ಅವರ ಡ್ಯಾನ್ಸ್ ಮೆಚ್ಚಿಕೊಳ್ಳದವರಿಲ್ಲ. ಸದ್ಯ, ಈ ಹಾಡು ಸಾಕಷ್ಟು ವೈರಲ್ ಆಗಿದೆ. ಇನ್ನು, ಕೃತಿ ಡ್ಯಾನ್ಸ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಡ್ಯಾನ್ಸ್ನಲ್ಲಿ ಪಳಗಿರುವ ಅವರು ಈ ಮೊದಲು ಕೊರಿಯೋಗ್ರಾಫರ್ನಿಂದ ಬೈಸಿಕೊಂಡಿದ್ದರು. ಅವರು ಸರಿಯಾಗಿ ಹೆಜ್ಜೆ ಹಾಕಿರಲಿಲ್ಲ ಎಂಬುದೇ ಇದಕ್ಕೆ ಕಾರಣ.
ಕೃತಿ ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡು ನಂತರ ಚಿತ್ರರಂಗಕ್ಕೆ ಬಂದವರು. ಮಾಡೆಲಿಂಗ್ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು ಅವರು. ಆದರೆ, ಆರಂಭದಲ್ಲಿ ಕೃತಿ ಕಷ್ಟಗಳನ್ನು ಎದುರಿಸಿದ್ದರು. ಸುಮಾರು 20 ಮಾಡೆಲ್ಗಳ ಎದುರು ಕೃತಿಗೆ ಕೊರಿಯೋಗ್ರಾಫರ್ನಿಂದ ಅವಮಾನವಾಗಿತ್ತು. ಈ ಬಗ್ಗೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ಅದು ನನ್ನ ಮೊದಲ ರ್ಯಾಂಪ್ ಶೋ. ನಾನು ಹೆಜ್ಜೆ ತಪ್ಪಿದ್ದೆ. ಕೋರಿಯೋಗ್ರಾಫರ್ ಹೇಳಿದ್ದಕ್ಕೆ ವಿರುದ್ಧವಾಗಿ ಮಾಡಿದ್ದೆ. ಅವರು ತುಂಬಾನೇ ಸಿಟ್ಟಾದರು. 20 ಮಾಡೆಲ್ಗಳ ಎದುರು ನನ್ನನ್ನು ಬೈದಿದ್ದರು. ಯಾರಾದರೂ ನನ್ನನ್ನು ಬೈದರೆ ನಾನು ಅಳೋಕೆ ಪ್ರಾರಂಭಿಸುತ್ತೇನೆ. ಅಂದು ಕೂಡ ನಾನು ಗಳಗಳನೆ ಅತ್ತಿದ್ದೆ’ ಎಂದರು ಕೃತಿ.
‘ಆಟೋದಲ್ಲಿ ಅಂದು ನಾನು ಮನೆಗೆ ತೆರಳಿದ್ದೆ. ದಾರಿಯುದ್ದಕೂ ಅಳುತ್ತಲೇ ಇದ್ದೆ. ನಾನು ಅಮ್ಮನ ಎದುರು ಕುಳಿತು ಅತ್ತಿದೆ. ನಿನಗೆ ಈ ವೃತ್ತಿ ಸರಿ ಹೊಂದುತ್ತದೆಯೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಮಾನಸಿಕವಾಗಿ ನೀನು ಗಟ್ಟಿ ಆಗಬೇಕು ಎಂದು ಅಮ್ಮ ಹುರಿದುಂಬಿಸಿದ್ದರು’ ಎಂದಿದ್ದಾರೆ ಅವರು.
2014ರಲ್ಲಿ ತೆರೆಗೆ ಬಂದ ತೆಲುಗಿನ ‘1: ನೆನೊಕ್ಕಡಿನೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಕೃತಿ. ಅದೇ ವರ್ಷ ತೆರೆಗೆ ಬಂದ ‘ಹೀರೋಪಂತಿ’ ಸಿನಿಮಾ ಕೃತಿಗೆ ಹೆಸರು ತಂದುಕೊಟ್ಟಿತು. ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ‘ಮಿಮಿ’ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ಮಾಡಿದೆ. ಸದ್ಯ, ಅವರ ಕೈಯಲ್ಲಿ ನಾಲ್ಕು ಹಿಂದಿ ಚಿತ್ರಗಳಿವೆ. ಇದರಲ್ಲಿ ಕೆಲ ಸಿನಿಮಾಗಳ ಕೆಲಸಗಳು ಪೂರ್ಣಗೊಂಡಿದ್ದು, ರಿಲೀಸ್ಗೆ ರೆಡಿ ಇದೆ.
ಇದನ್ನೂ ಓದಿ: ‘ಪರಮ ಸುಂದರಿ’ ಹಾಡಿನಿಂದ ಮಿಂಚುತ್ತಿರುವ ನಟಿ ಕೃತಿ ಸನೋನ್ ಸಂಭಾವನೆ ಎಷ್ಟು? ಇಲ್ಲಿವೆ ಇಂಟರೆಸ್ಟಿಂಗ್ ವಿಷಯಗಳು