ಮಹಿಳೆಯರ ಸುರಕ್ಷತೆ ಬಗ್ಗೆ ಪ್ರತಿ ದಿನವೂ ಚರ್ಚೆ ನಡೆಯುತ್ತದೆ. ಪ್ರತಿ ಬಾರಿ ಏನಾದರೊಂದು ಕ್ರೈಮ್ ನಡೆದಾಗ ‘ಸ್ತ್ರೀಯರಿಗೆ ಇಲ್ಲಿ ಎಷ್ಟು ರಕ್ಷಣೆ ಇದೆ’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಪ್ರಗತಿ ಹೊಂದಿವೆ ಎಂದು ಹೇಳಿಕೊಳ್ಳುವ ನಗರಗಳಲ್ಲೂ ಹೆಣ್ಮಕ್ಕಳ ಸೇಫ್ಟಿ ಬಗ್ಗೆ ಖಚಿತತೆ ಇಲ್ಲದಂತಹ ವಾತಾವರಣ ಇದೆ. ಈ ಬಗ್ಗೆ ಖ್ಯಾತ ನಟಿ ಸಾನಿಯಾ ಮಲ್ಹೋತ್ರಾ (Sanya Malhotra) ಅವರು ಮಾತನಾಡಿದ್ದಾರೆ. ನೇರವಾಗಿ ಅವರು ಕೆಲವು ಆರೋಪಗಳನ್ನು ಮಾಡಿದ್ದಾರೆ. ಅಚ್ಚರಿ ಎಂದರೆ ಅವರು ತಕರಾರು ತೆಗೆದಿರುವುದು ಅವರ ಹುಟ್ಟೂರಿನ ಬಗ್ಗೆ. ಹೌದು, ಸಾನಿಯಾ ಮಲ್ಹೋತ್ರಾ ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. ಈಗ ಅವರು ವೃತ್ತಿಜೀವನದ ಕಾರಣದಿಂದ ಮುಂಬೈನಲ್ಲಿ (Mumbai) ಸೆಟ್ಲ್ ಆಗಿದ್ದಾರೆ. ಮಹಿಳೆಯವರಿಗೆ ದೆಹಲಿ (Delhi) ಸುರಕ್ಷಿತವಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸಾನಿಯಾ ಮಲ್ಹೋತ್ರಾ ಅವರು ಮುಂಬೈನಲ್ಲಿ ಹೊಸ ಮನೆ ಖರೀದಿಸಿದರು. ಅದೇ ಅಪಾರ್ಟ್ಮೆಂಟ್ನಲ್ಲಿ ಹೃತಿಕ್ ರೋಷನ್ ಅವರ ಮನೆ ಕೂಡ ಇದೆ ಎಂಬುದು ವಿಶೇಷ. ಸಿನಿಮಾ ಕೆಲಸಗಳ ಸಲುವಾಗಿ ದೆಹಲಿ ಬಿಟ್ಟು ಮುಂಬೈಗೆ ಬಂದಿರುವ ಸಾನಿಯಾ ಮಲ್ಹೋತ್ರಾ ಅವರು ಹೀಗೊಂದು ಹೇಳಿಕೆ ನೀಡಿದ್ದಾರೆ. ಮುಂಬೈಗೆ ಹೋಲಿಸಿದರೆ ದೆಹಲಿಯಲ್ಲಿ ಮಹಿಳೆಯರಿಗೆ ಸುರಕ್ಷಿತೆ ಕಡಿಮೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
‘ನಾನು ದೆಹಲಿ ಮೂಲದವಳು. ಹಾಗಿದ್ದರೂ ಮುಂಬೈ ನಗರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಇದೆ. ಮುಂಬೈನಲ್ಲಿ ನನಗೆ ಹೆಚ್ಚು ಸುರಕ್ಷಿತ ಭಾವನೆ ಮೂಡುತ್ತದೆ. ದೆಹಲಿ ಅಭಿವೃದ್ಧಿ ಹೊಂದಿದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಅಲ್ಲಿ ನನಗೆ ಸೇಫ್ ಎನಿಸುವುದಿಲ್ಲ. ದೆಹಲಿಯಲ್ಲಿ ಪ್ರತಿ ಹುಡುಗಿಗೂ ಚುಡಾಯಿಸಲಾಗಿರುತ್ತದೆ’ ಎಂದು ಸಾನಿಯಾ ಮಲ್ಹೋತ್ರಾ ಹೇಳಿದ್ದಾರೆ.
ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾದಲ್ಲಿ ಸಾನಿಯಾ ಮಲ್ಹೋತ್ರಾ ಮಿಂಚಿದರು. ಆ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತು. ನಂತರ ಅವರು ‘ಬದಾಯಿ ಹೋ’, ‘ಪಟಾಕಾ’, ‘ಶಕುಂತಲಾ ದೇವಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು.
Published On - 9:33 am, Thu, 14 July 22