
ಬಾಯಿಗೆ ಬಂದಂತೆ ಮಾತನಾಡುತ್ತ, ಅನೇಕ ಸಿನಿಮಾಗಳನ್ನು ಕಟುವಾಗಿ ಹೀಯಾಳಿಸುತ್ತಿದ್ದ ಕಮಾಲ್ ಆರ್. ಖಾನ್ (Kamaal R Khan) ಅವರನ್ನು ಅರೆಸ್ಟ್ ಮಾಡಲಾಗಿದೆ. ಎರಡು ಕೇಸ್ಗಳು ಅವರ ಮೇಲೆ ದಾಖಲಾಗಿವೆ. ಸೆಲೆಬ್ರಿಟಿಗಳ ವಿರುದ್ಧ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದು ಹಾಗೂ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಅವರ ಮೇಲಿವೆ. ಒಂದು ಕೇಸ್ನಲ್ಲಿ ಜಾಮೀನು ಸಿಕ್ಕಿದ್ದರೂ ಕೂಡ ಇನ್ನೊಂದು ಕೇಸ್ನಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿ ಇರುವಂತೆ ಆಗಿದೆ. ಇದಕ್ಕೆಲ್ಲ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ತಂಡ ಕಾರಣ ಎಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ. ತೀರಾ ವಿಲಕ್ಷಣವಾದ ಪೋಸ್ಟ್ಗಳನ್ನು ಕೆಲವರು ಹಾಕುತ್ತಿದ್ದಾರೆ. ಈ ವಿವಾದದಲ್ಲಿ ಕರಣ್ ಜೋಹರ್ (Karan Johar) ಅವರ ಹೆಸರನ್ನು ಕೂಡ ಎಳೆದು ತರಲಾಗಿದೆ.
ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳನ್ನು ಕಮಾಲ್ ಆರ್. ಖಾನ್ ಎದುರು ಹಾಕಿಕೊಂಡಿದ್ದಾರೆ. ಹಲವಾರು ಸಿನಿಮಾಗಳ ಬಗ್ಗೆ ಅವರು ಕಟು ಟೀಕೆ ಮಾಡಿದ್ದಾರೆ. ರಿಲೀಸ್ ಆಗುವುದಕ್ಕೂ ಮುನ್ನವೇ ಎಷ್ಟೋ ಚಿತ್ರಗಳನ್ನು ಫ್ಲಾಪ್ ಎಂದು ಘೋಷಿಸಿದ್ದಾರೆ. ಈಗ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 9ರಂದು ಈ ಚಿತ್ರ ಅದ್ದೂರಿಯಾಗಿ ತೆರೆ ಕಾಣಲಿದೆ. ಕಮಾಲ್ ಆರ್. ಖಾನ್ ಅವರ ಕೆಟ್ಟ ವಿಮರ್ಶೆಯನ್ನು ತಡೆಯುವ ಸಲುವಾಗಿಯೇ ಅವರನ್ನು ಅರೆಸ್ಟ್ ಮಾಡಿಸಲಾಗಿದೆ ಎಂದು ಒಂದು ವರ್ಗದ ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ತೆರೆಕಾಣುತ್ತಿದೆ. ಹಿಂದಿಯ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಆಗಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಅಯಾನ್ ಮುಖರ್ಜಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದ ನಿರ್ಮಾಪಕರಲ್ಲಿ ಕರಣ್ ಜೋಹರ್ ಕೂಡ ಒಬ್ಬರು. ಅವರು ಬಾಲಿವುಡ್ನಲ್ಲಿ ಪ್ರಭಾವಿ ವ್ಯಕ್ತಿ. ತಮ್ಮ ಈ ಸಿನಿಮಾವನ್ನು ಕೆಟ್ಟ ವಿಮರ್ಶೆಯಿಂದ ಬಚಾವ್ ಮಾಡಿಕೊಳ್ಳಲು ಅವರು ಕಮಾಲ್ ಆರ್. ಖಾನ್ರನ್ನು ಅರೆಸ್ಟ್ ಮಾಡಿಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಈ ಚಿತ್ರ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಳ್ಳುವವರೆಗೂ ಜೈಲಿನಿಂದ ಕೆಆರ್ಕೆ ಹೊರಗೆ ಬರುವುದಿಲ್ಲ ಎಂದು ಹಲವರು ಊಹಿಸುತ್ತಿದ್ದಾರೆ.
ಇಂಥ ಆರೋಪಗಳಿಗೆಲ್ಲ ಚಿತ್ರತಂಡ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಚಿತ್ರದ ಪ್ರಚಾರದಲ್ಲಿ ತಂಡ ನಿರತವಾಗಿದೆ. ಮೂರು ಪಾರ್ಟ್ಗಳಲ್ಲಿ ಮೂಡಿಬರಲಿರುವ ಈ ಸಿನಿಮಾದ ಮೊದಲ ಪಾರ್ಟ್ ಈಗ ಬಿಡುಗಡೆ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.