
ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ವೈಯಕ್ತಿಕ ಜೀವನದ ಅನೇಕ ವಿಚಾರಗಳು ಗುಟ್ಟಾಗಿ ಉಳಿದಿಲ್ಲ. ರಣಬೀರ್ ಕಪೂರ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದ ಅವರು ನಂತರ ಬ್ರೇಕಪ್ ಮಾಡಿಕೊಂಡರು. ಬಳಿಕ ರಣವೀರ್ ಸಿಂಗ್ ಜೊತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಾಗಂತ ಮಾಜಿ ಪ್ರಿಯಕರ ರಣಬೀರ್ ಕಪೂರ್ (Ranbir Kapoor) ಬಗ್ಗೆ ಅವರಿಗೆ ಯಾವುದೇ ವೈಮನಸ್ಸು ಇಲ್ಲ. ಅಚ್ಚರಿ ಏನೆಂದರೆ ಈಗ ಅವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದಾರಾ ಎಂಬ ಅನುಮಾನ ಸೃಷ್ಟಿ ಆಗಿದೆ. ಅದು ಕೂಡ ಕದ್ದು ಮುಚ್ಚಿ ಅಭಿನಯಿಸಿದ್ದಾರೆ ಎಂಬ ಗುಮಾನಿ ಶುರುವಾಗಿದೆ. ಅದಕ್ಕೆಲ್ಲ ಕಾರಣ ಆಗಿರುವುದು ‘ಬ್ರಹ್ಮಾಸ್ತ್ರ’ (Brahmastra) ಚಿತ್ರದ ಟ್ರೇಲರ್. ರಣಬೀರ್ ಕಪೂರ್ ಹೀರೋ ಆಗಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ ಎಂದು ಚಿತ್ರತಂಡ ಈವರೆಗೂ ಬಹಿರಂಗವಾಗಿ ಹೇಳಿಲ್ಲ. ಆದರೆ ಟ್ರೇಲರ್ನಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ ಎಂಬುದನ್ನು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಫ್ಯಾಂಟಸಿ ಕಥೆ ಇದೆ. ಮೂರು ಪಾರ್ಟ್ಗಳಲ್ಲಿ ಇದು ಮೂಡಿಬರುತ್ತಿದೆ. ಮೊದಲ ಪಾರ್ಟ್ಗೆ ‘ಬ್ರಹ್ಮಾಸ್ತ್ರ ಪಾರ್ಟ್ 1: ಶಿವ’ ಎಂದು ಹೆಸರು ಇಡಲಾಗಿದೆ. ಈ ಚಿತ್ರದಲ್ಲಿ ಶಿವನಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಇದರ ಟ್ರೇಲರ್ ಬಿಡುಗಡೆ ಆಗಿತ್ತು. ಆಗ ಅದರಲ್ಲಿ ಯಾರಿಗೂ ದೀಪಿಕಾ ಪಡುಕೋಣೆ ಕಾಣಿಸಿರಲಿಲ್ಲ. ಈಗ ಇದೇ ಟ್ರೇಲರ್ನ 4k ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರಿಗೆ ದೀಪಿಕಾ ಪಡುಕೋಣೆ ಕಣ್ಣಿಗೆ ಬಿದ್ದಿದ್ದಾರೆ.
ಈ ಸಿನಿಮಾದಲ್ಲಿ ಜಲ, ವಾಯು ಮತ್ತು ಅಗ್ನಿಯ ಪಾತ್ರಗಳು ಇವೆ. ಒಂದೊಂದು ಶಕ್ತಿಯನ್ನು ಒಬ್ಬೊಬ್ಬರು ಪ್ರತಿನಿಧಿಸುತ್ತಾರೆ. ಜಲದ ಬಗ್ಗೆ ಪ್ರಸ್ತಾಪಿಸುವಾಗ ದೂರದಲ್ಲಿ ನಟಿಯೊಬ್ಬರು ನಡೆದುಬರುತ್ತಿರುವುದು ಕಾಣಿಸಿದೆ. ಆ ದೃಶ್ಯ ಅಸ್ಪಷ್ಟವಾಗಿದೆ. ಅದರಲ್ಲಿ ಇರುವುದು ದೀಪಿಕಾ ಪಡುಕೋಣೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಇದೊಂದು ಬಹುತಾರಾಗಣದ ಸಿನಿಮಾ. ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಶಾರುಖ್ ಖಾನ್, ಮೌನಿ ರಾಯ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಅದೇ ರೀತಿ ದೀಪಿಕಾ ಪಡುಕೋಣೆ ಕೂಡ ಅಭಿನಯಿಸಿರಬಹುದು. ಅವರ ಪಾತ್ರವನ್ನು ನಿರ್ದೇಶಕ ಅಯಾನ್ ಮುಖರ್ಜಿ ಗುಟ್ಟಾಗಿ ಇಟ್ಟಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಸದ್ಯ ಈ ಟ್ರೇಲರ್ನ ಸ್ಕ್ರೀನ್ ಶಾಟ್ಗಳು ವೈರಲ್ ಆಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:08 pm, Mon, 20 June 22