ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯಕ್ಕಂತೂ ಅವರು ಸಿನಿಮಾ ಕೆಲಸಗಳ ಸಲುವಾಗಿ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಹಿಂಬಾಲಿಸುತ್ತಾರೆ. ಅಷ್ಟೇ ಅಲ್ಲ, ಅಭಿಮಾನಿಗಳು (Rashmika Mandanna Fans) ಕೂಡ ಸೆಲ್ಫಿ ಸಲುವಾಗಿ ಮುತ್ತಿಕೊಳ್ಳುತ್ತಾರೆ. ಆದರೂ ಕೂಡ ರಶ್ಮಿಕಾ ಕಿರಿಕಿರಿ ಮಾಡಿಕೊಂಡಿಲ್ಲ. ಎಲ್ಲವನ್ನೂ ಅವರು ನಗುಮುಖದಿಂದಲೇ ನಿಭಾಯಿಸುತ್ತಿದ್ದಾರೆ. ಅವರ ಈ ಗುಣ ಕಂಡು ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಗುಣಕ್ಕೆ ಸಾಕ್ಷಿ ಎಂಬಂತೆ ಒಂದು ಹೊಸ ವಿಡಿಯೋ ವೈರಲ್ ಆಗಿದೆ. ಅಭಿಮಾನಗಳು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಬಹುತೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಫೋಟೋಗಾಗಿ ಜನರು ಮುಗಿಬಿದ್ದಾಗ ಸೆಲೆಬ್ರಿಟಿಗಳು ಕೆಲವೊಮ್ಮೆ ಸಿಟ್ಟಾಗುವುದುಂಟು. ಕೆಲವು ನಟ-ನಟಿಯರು ತುಂಬ ದುರಹಂಕಾರದಿಂದ ನಡೆದುಕೊಂಡಿದ್ದೂ ಇದೆ. ಆದರೆ ರಶ್ಮಿಕಾ ಮಂದಣ್ಣ ಆ ರೀತಿ ಮಾಡಿಲ್ಲ. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರನ್ನು ಕಂಡ ತಕ್ಷಣ ಕೆಲವು ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು. ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸಿ, ಸೆಲ್ಫಿಗೆ ಪೋಸ್ ನೀಡಿ ರಶ್ಮಿಕಾ ಮುಂದೆ ಸಾಗಿದರು.
ಹಲವು ಪ್ರಾಜೆಕ್ಟ್ಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ. ಸಹಜವಾಗಿಯೇ ಅವರ ದಿನಚರಿಯಲ್ಲಿ ತುಂಬ ಒತ್ತಡ ಇರುತ್ತದೆ. ಹಲವು ಕಡೆಗಳಿಗೆ ಅವರು ಪ್ರಯಾಣ ಮಾಡಬೇಕಿರುತ್ತದೆ. ಈ ನಡುವೆಯೂ ಅವರನ್ನು ಅಭಿಮಾನಿಗಳು ಮುತ್ತಿಕೊಂಡಾಗ ತಾಳ್ಮೆಯಿಂದ ನಡೆದುಕೊಂಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದ ಮಕ್ಕಳನ್ನು ಅವರು ಪ್ರೀತಿಯಿಂದ ಮಾತನಾಡಿಸಿದ್ದಾರೆ.
ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳಲು ರಶ್ಮಿಕಾ ಮಂದಣ್ಣ ಸಕಲ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆ ‘ಮಿಷನ್ ಮಜ್ನು’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗಳೆಲ್ಲವೂ ಬಿಡುಗಡೆಗೆ ಸಜ್ಜಾಗುತ್ತಿವೆ. ರಣಬೀರ್ ಕಪೂರ್ ಜೊತೆ ‘ಅನಿಮಲ್’ ಸಿನಿಮಾದಲ್ಲಿ ನಟಿಸುವ ಅವಕಾಶವೂ ರಶ್ಮಿಕಾಗೆ ಒದಗಿಬಂದಿದೆ.
ಹಿಂದಿ ಪ್ರೇಕ್ಷಕರಿಗೆ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಪರಿಚಿತರಾಗಿದ್ದಾರೆ. ಅಲ್ಲು ಅರ್ಜುನ್ ಜೊತೆ ಅವರು ನಟಿಸಿದ್ದ ‘ಪುಷ್ಪ’ ಸಿನಿಮಾ ಹಿಂದಿಗೂ ಡಬ್ ಆಗಿ ತೆರೆಕಂಡಿತ್ತು. ಉತ್ತರ ಭಾರತದಲ್ಲಿ ಆ ಚಿತ್ರ ಧೂಳೆಬ್ಬಿಸಿತ್ತು. ಆ ಮೂಲಕ ಹಿಂದಿ ಸಿನಿಪ್ರಿಯರ ವಲಯದಲ್ಲಿ ರಶ್ಮಿಕಾ ಮಂದಣ್ಣ ಫೇಮಸ್ ಆಗಿದ್ದಾರೆ. ಅವರ ಮುಂಬರುವ ಸಿನಿಮಾಗಳಿಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.