
ನಟ ಶಾರುಖ್ ಖಾನ್ ಅಭಿನಯದ ‘ಪಠಾಣ್’ (Pathaan Movie) ಚಿತ್ರಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಗುಜರಾತ್ನಲ್ಲಿ ಭಜರಂಗ ದಳದ (Bajrang Dal) ಕಾರ್ಯಕರ್ತರು ಈ ಸಿನಿಮಾದ ಪೋಸ್ಟರ್ಗಳನ್ನು ಕಿತ್ತು ಹಾಕಿದ ಘಟನೆ ನಡೆದಿದೆ. ಅದರ ವಿಡಿಯೋ ವೈರಲ್ ಆಗಿದ್ದು, ಆ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಾಲಿವುಡ್ ನಟಿ ಪೂಜಾ ಭಟ್ ಅವರು ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಪಠಾಣ್’ ಸಿನಿಮಾ ವಿರುದ್ಧ ಭಜರಂಗ ದಳದವರು ಪ್ರತಿಭಟನೆ ಮಾಡಿದ್ದಾರೆ ಎಂದು ಎಎನ್ಐ ನ್ಯೂಸ್ ಏಜೆನ್ಸಿ ವರದಿ ಮಾಡಿದ್ದಕ್ಕೆ ಪೂಜಾ ಭಟ್ (Pooja Bhatt) ಪ್ರತಿಕ್ರಿಯೆ ನೀಡಿದ್ದು, ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸ ಇದೆ’ ಎಂದು ಅವರು ಹೇಳಿದ್ದಾರೆ. ಅವರ ಟ್ವೀಟ್ ವೈರಲ್ ಆಗಿದೆ. ಜನರು ಕಮೆಂಟ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.
ಭಜರಂಗ ದಳ ಕಾರ್ಯಕರ್ತರು ‘ಪಠಾಣ್’ ಪ್ರಚಾರಕ್ಕೆ ಅಡ್ಡಿ ಪಡಿಸಿದ ಘಟನೆ ಗುಜರಾತ್ನಲ್ಲಿ ಇತ್ತೀಚೆಗೆ ನಡೆದಿದೆ. ಚಿತ್ರಮಂದಿರವೊಂದರಲ್ಲಿ ‘ಪಠಾಣ್’ ಚಿತ್ರದ ಪೋಸ್ಟರ್ ಮತ್ತು ಸ್ಟ್ಯಾಂಡಿಗಳನ್ನು ಹಾಕಲಾಗಿತ್ತು. ಅದನ್ನು ಕಿತ್ತು ಹಾಕುವ ಮೂಲಕ ಭಜರಂಗ ದಳದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತ ಗಲಾಟೆ ಮಾಡಲಾಗಿದೆ. ದಾಂಧಲೆ ತಡೆಯಲು ಮಲ್ಟಿಪ್ಲೆಕ್ಸ್ ಸಿಬ್ಬಂದಿ ಪ್ರಯತ್ನ ನಡೆಸಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಇದನ್ನು ಕೇವಲ ಪ್ರತಿಭಟನೆ ಎಂದು ಸುದ್ದಿ ಮಾಡಿರುವುದನ್ನು ಪೂಜಾ ಭಟ್ ಖಂಡಿಸಿದ್ದಾರೆ.
‘ಭಜರಂಗ ದಳದ ಪ್ರತಿಭಟನೆ’ ಎಂದು ನ್ಯೂಸ್ ಏಜೆನ್ಸಿ ಮಾಡಿದ ಟ್ವೀಟ್ಗೆ ಪೂಜಾ ಭಟ್ ಪ್ರತಿಕ್ರಿಯಿಸಿದ್ದಾರೆ. ‘ಪ್ರತಿಭಟನೆ ಎಂದರೆ ಸಂಘಟಿತ ರೀತಿಯಲ್ಲಿ ಸಾರ್ವಜನಿಕವಾಗಿ ಪ್ರತಿರೋಧ ವ್ಯಕ್ತಪಡಿಸುವುದು. ಗಲಭೆ ಎಂದರೆ ಜನರ ಗುಂಪೊಂದು ಹಿಂಸಾತ್ಮಕ ಮಾರ್ಗದಿಂದ ಶಾಂತಿ ಕದಡಿ ಭಯಗೊಳಿಸುವುದು’ ಎಂದು ಪೂಜಾ ಭಟ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಪರ-ವಿರೋಧದ ಚರ್ಚೆ ಮಾಡುತ್ತಿದ್ದಾರೆ.
ಮಾಲ್ನಲ್ಲಿ ಪೋಸ್ಟರ್ ಕಿತ್ತುಹಾಕಿ ಗಲಭೆ ನಡೆಸಿದ ಬಳಿಕ ಭಜರಂಗ ದಳ ಕಾರ್ಯಕರ್ತರು ಟ್ವಿಟರ್ ಮೂಲಕ ಬೆದರಿಕೆ ಹಾಕಿದ್ದಾರೆ. ‘ಸನಾತನ ಧರ್ಮ ವಿರೋಧಿ ಶಾರುಖ್ ಖಾನ್ ಹಾಗೂ ಟುಕ್ಡೆ ಟುಕ್ಡೆ ಗ್ಯಾಂಗ್ನ ದೀಪಿಕಾ ಪಡುಕೋಣೆ ನಟಿಸಿದ ಸಿನಿಮಾವನ್ನು ಪ್ರದರ್ಶನ ಮಾಡಲು ಬಿಡುವುದಿಲ್ಲ. ಮಲ್ಟಿಪ್ಲೆಕ್ಸ್ನವರಿಗೆ ವಾರ್ನಿಂಗ್ ನೀಡಿದ್ದೇವೆ. ಒಂದು ವೇಳೆ ಸಿನಿಮಾ ರಿಲೀಸ್ ಮಾಡಿದರೆ ಭಜರಂಗ ದಳವು ತನ್ನ ವರಸೆ ತೋರಿಸಬೇಕಾಗುತ್ತದೆ’ ಎಂದು ಟ್ವೀಟ್ ಮಾಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:36 pm, Fri, 6 January 23