‘ಅನಿಮಲ್’ (Animal) ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಣ್ಬೀರ್ ಕಪೂರ್, ಬಾಲಿವುಡ್ನ ಪ್ಲೇಬಾಯ್ ಇಮೇಜಿನಿಂದ ಹೊರಬಂದು ಮಾಸ್ ಹೀರೋ ಎನಿಸಿಕೊಂಡಿದ್ದಾರೆ. ‘ಅನಿಮಲ್’ ಹಿಟ್ ಆದ ಬೆನ್ನಲ್ಲೆ ಸಂಜಯ್ ಲೀಲಾ ಬನ್ಸಾಲಿಯವರ ‘ಲವ್ ಆಂಡ್ ವಾರ್’ ಸಿನಿಮಾದ ಅವಕಾಶ ರಣ್ಬೀರ್ಗೆ ಲಭಿಸಿದ್ದು ಆ ಸಿನಿಮಾದಲ್ಲಿಯೂ ನೆಗೆಟಿವ್ ಶೇಡ್ನ ಪಾತ್ರದಲ್ಲಿಯೇ ರಣ್ಬೀರ್ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ವೈರುಧ್ಯವಾಗಿ ರಣ್ಬೀರ್ ಕಪೂರ್ ಅವರು ‘ರಾಮಾಯಣ’ ಆಧರಿತ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕಾಗಿ ವಿಶೇಷ ತಯಾರಿಯನ್ನು ರಣ್ಬೀರ್ ಆರಂಭಿಸಿದ್ದಾರೆ.
ಬಾಲಿವುಡ್ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ನಿತೇಶ್ ತಿವಾರಿ ರಾಮಾಯಣ ಕತೆ ಆಧರಿಸಿದ ಸಿನಿಮಾ ನಿರ್ದೇಶನ ಮಾಡಲಿದ್ದು, ಸಿನಿಮಾದಲ್ಲಿ ರಣ್ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಕ್ಕಾಗಿ ನಟ-ನಟಿಯರಿಗೆ ವಿಶೇಷ ತರಬೇತಿಗಳನ್ನು ಕೊಡಿಸಲಾಗುತ್ತಿದೆ. ಅದರಲ್ಲಿಯೂ ಮುಖ್ಯ ಪಾತ್ರವಾದ ಶ್ರೀರಾಮನ ಪಾತ್ರಕ್ಕೆ ಹಲವು ರೀತಿಯ ತರಬೇತಿಗಳನ್ನು ಕೊಡಿಸಲಾಗುತ್ತಿದೆ.
ಕೆಲ ತಿಂಗಳ ಹಿಂದಷ್ಟೆ ಸಿನಿಮಾದ ಮುಖ್ಯ ನಟರನ್ನು ಅಮೆರಿಕದ ಜನಪ್ರಿಯ ಸ್ಟುಡಿಯೋಕ್ಕೆ ಕರೆದೊಯ್ದು ಲುಕ್ ಟೆಸ್ಟ್ ಅನ್ನು ಭಿನ್ನ ರೀತಿಯಲ್ಲಿ ಮಾಡಲಾಗಿದೆ. ಸಿನಿಮಾವನ್ನು ಚಿತ್ರೀಕರಣ ಮಾಡಲಾಗುತ್ತಿರುವ ತಂತ್ರಜ್ಞಾನದ ಪರಿಚಯವನ್ನು ಮಾಡಿಸಲಾಗಿದೆ ಎಂಬ ಸುದ್ದಿಗಳು ಹರಿದಾಡಿತ್ತು. ಇದೀಗ ಬಂದಿರುವ ಹೊಸ ಸುದ್ದಿಯೆಂದರೆ ಶ್ರೀರಾಮನ ಪಾತ್ರ ನಿರ್ವಹಿಸಲಿರುವ ರಣ್ಬೀರ್ ಕಪೂರ್ ಅವರಿಗೆ ಭಿನ್ನವಾದ ತರಬೇತಿಯೊಂದನ್ನು ಕೊಡಿಸಲಾಗುತ್ತಿದೆ.
ಇದನ್ನೂ ಓದಿ:ತಮ್ಮ ಮೆಚ್ಚಿನ ತಮಿಳು ಸಿನಿಮಾಗಳ ಹೆಸರಿಸಿದ ರಣ್ಬೀರ್ ಕಪೂರ್
ರಣ್ಬೀರ್ ಕಪೂರ್ ಅವರಿಗೆ ಧ್ವನಿ ಮತ್ತು ಧ್ವನಿಯ ಏರಿಳಿತದ ತರಬೇತಿ ಕೊಡಿಸಲಾಗುತ್ತಿದೆ. ರಾಮನ ಪಾತ್ರದ ಡಬ್ಬಿಂಗ್ ಅನ್ನು ರಣ್ಬೀರ್ ಅವರೇ ಮಾಡಬೇಕಿದ್ದು ಅವರ ಧ್ವನಿಯಲ್ಲಿರುವ ಕೆಲವು ಋಣಾತ್ಮಕ ಅಂಶಗಳನ್ನು ತಿದ್ದುವ ಕಾರಣದಿಂದ ಈ ತರಬೇತಿ ಕೊಡಿಸಲಾಗುತ್ತಿದೆ. ಜೊತೆಗೆ ಧ್ವನಿಯ ಏರಿಳಿತದ ತರಬೇತಿಯನ್ನು ಸಹ ಕೊಡಿಸಲಾಗುತ್ತಿದೆ. ರಾಮನ ಪಾತ್ರದಲ್ಲಿ ಸಂಭಾಷಣೆ ಹೇಳುವ ಕ್ರಮ ಸಹ ಭಿನ್ನವಾಗಿದ್ದು ಅದಕ್ಕಾಗಿ ವಿಶೇಷ ತರಬೇತಿಯನ್ನು ರಣ್ಬೀರ್ ಪಡೆಯಲೇ ಬೇಕಿದೆ. ರಾವಣ ಪಾತ್ರಧಾರಿ ನಟ ಯಶ್ಗೂ ಇದೇ ತರಬೇತಿ ನೀಡುವ ಸಾಧ್ಯತೆ ಇದೆ.
ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಸೀತಾಮಾತೆಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು, ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ಸೀತೆಯ ಪಾತ್ರದಲ್ಲಿ ಜಾನ್ಹವಿ ಕಪೂರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಸಹ ರಾಮಾಯಣ ಕತೆ ಆಧರಿತವಾಗಿತ್ತು, ಕಳೆದ ವರ್ಷ ಬಿಡುಗಡೆ ಆದ ಈ ಸಿನಿಮಾ ಫ್ಲಾಪ್ ಆಯ್ತು. ಇದೀಗ ಮತ್ತೊಂದು ರಾಮಾಯಣ ಆಧರಿತ ಸಿನಿಮಾ ಸಿದ್ಧವಾಗುತ್ತಿದೆ. ಸಿನಿಮಾದ ಅಧಿಕೃತ ಘೋಷಣೆ ಇನ್ನಷ್ಟೆ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ