‘ರಾಮಾಯಣ’ ಸಿನಿಮಾ ಪ್ರೇಕ್ಷಕರಿಗೆ ಗುಡ್ ನ್ಯೂಸ್: ನವೆಂಬರ್ 20ರಿಂದ ಟಿಕೆಟ್ ದರ ಇಳಿಕೆ

‘ರಾಮಾಯಣ: ಪಾರ್ಟ್ 1’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಆದರೆ ಈ ಸಿನಿಮಾದ ಟಿಕೆಟ್ ಬೆಲೆ ಜಾಸ್ತಿ ಇದೆ ಎಂಬ ಕಾರಣಕ್ಕೆ ಅನೇಕರು ಇನ್ನೂ ಸಿನಿಮಾ ವೀಕ್ಷಿಸಿಲ್ಲ. ಅಂಥ ಪ್ರೇಕ್ಷಕರಿಗೆ ಒಂದು ಆಫರ್ ನೀಡಲಾಗುತ್ತಿದೆ. ಈ ಸಿನಿಮಾದ ಟಿಕೆಟ್ ದರ ತಗ್ಗಿಸಲು ನಿರ್ಧರಿಸಲಾಗಿದೆ.

‘ರಾಮಾಯಣ’ ಸಿನಿಮಾ ಪ್ರೇಕ್ಷಕರಿಗೆ ಗುಡ್ ನ್ಯೂಸ್: ನವೆಂಬರ್ 20ರಿಂದ ಟಿಕೆಟ್ ದರ ಇಳಿಕೆ
Ranbir Kapoor

Updated on: Nov 19, 2026 | 6:01 PM

ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಹಬ್ಬ ಮತ್ತು ರಜಾದಿನಗಳು ಮುಗಿದ ನಂತರವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ, ಟಿಕೆಟ್ ದರ ಹೆಚ್ಚಾಗಿದೆ ಎಂಬ ಕಾರಣಕ್ಕೆ ಒಂದು ವರ್ಗದ ಪ್ರೇಕ್ಷಕರು ಥಿಯೇಟರ್‌ಗಳಿಂದ ದೂರ ಉಳಿದಿದ್ದರು. ಇದೀಗ ಅಂತಹ ಸಿನಿಪ್ರಿಯರಿಗೆ ಚಿತ್ರತಂಡ ಭರ್ಜರಿ ಸಿಹಿಸುದ್ದಿ ನೀಡಿದ್ದು, ನವೆಂಬರ್ 20ರಿಂದ ಕಡಿಮೆ ದರದಲ್ಲಿ ‘ರಾಮಾಯಣ’ ವೀಕ್ಷಿಸುವ ಅವಕಾಶ ಸಿಗಲಿದೆ.

‘ಬಾಲಿವುಡ್ ಹಂಗಾಮಾ’ ವರದಿಯ ಪ್ರಕಾರ, ನವೆಂಬರ್ 20ರಿಂದ ‘ರಾಮಾಯಣ’ ಚಿತ್ರಕ್ಕೆ ‘ಬ್ಲಾಕ್‌ಬಸ್ಟರ್’ ಅಥವಾ ‘ಪಾಪ್ಯುಲರ್’ ಟಿಕೆಟ್ ದರಗಳನ್ನು ವಿಧಿಸುವ ಅಗತ್ಯವಿಲ್ಲ ಎಂದು ಚಿತ್ರಮಂದಿರಗಳಿಗೆ ಸೂಚನೆ ನೀಡಲಾಗಿದೆ. ಬದಲಾಗಿ, 2ಡಿ, ಮತ್ತು 3ಡಿ ಅವತರಣಿಕೆಗಳಿಗೆ ಸಾಮಾನ್ಯ ವಾರಾಂತ್ಯದ ದರಗಳಲ್ಲಿ ಟಿಕೆಟ್ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಆದರೆ, 3ಡಿ ಪ್ರದರ್ಶನಗಳಿಗೆ ಅನ್ವಯವಾಗುವ ಹೆಚ್ಚುವರಿ 3ಡಿ ಶುಲ್ಕವನ್ನು ಟಿಕೆಟ್ ದರದೊಂದಿಗೆ ಸೇರಿಸಲಾಗುತ್ತದೆ.

Loading...

ಸಾಮಾನ್ಯ ಪರದೆಗಳ ಟಿಕೆಟ್ ದರ ಇಳಿಕೆಯಾಗಿದ್ದರೂ, ಐಮ್ಯಾಕ್ಸ್ ಮತ್ತು ಇತರ ವಿಶೇಷ ಫಾರ್ಮ್ಯಾಟ್‌ಗಳಲ್ಲಿ ‘ರಾಮಾಯಣ’ ವೀಕ್ಷಿಸಲು ಭಾರಿ ಬೇಡಿಕೆ ಇರುವುದರಿಂದ ಅವುಗಳ ದರ ತುಸು ಹೆಚ್ಚಾಗಿಯೇ ಇರಲಿದೆ. ಅದರಂತೆ, ಶುಕ್ರವಾರ (ನವೆಂಬರ್ 20) ಐಮ್ಯಾಕ್ಸ್ ಮತ್ತು ವಿಶೇಷ ಫಾರ್ಮ್ಯಾಟ್‌ಗಳಿಗೆ ‘ಪಾಪ್ಯುಲರ್ ವೀಕೆಂಡ್’ ದರ ಹಾಗೂ ಶನಿವಾರ (ನವೆಂಬರ್ 21) ಮತ್ತು ಭಾನುವಾರ (ನವೆಂಬರ್ 22) ‘ಬ್ಲಾಕ್‌ಬಸ್ಟರ್ ವೀಕೆಂಡ್’ ದರವನ್ನು ವಿಧಿಸಲು ಚಿತ್ರಮಂದಿರಗಳಿಗೆ ತಿಳಿಸಲಾಗಿದೆ.

ಇನ್ನು ನವೆಂಬರ್ 24ರ ಮಂಗಳವಾರದಂದು ವಿಶೇಷ ರಿಯಾಯಿತಿ ದರದ ಆಫರ್ ಅನ್ವಯವಾಗುವ ನಿರೀಕ್ಷೆಯಿದೆ ಎಂದು ಕೆಲವು ಚಿತ್ರಮಂದಿರಗಳು ತಿಳಿಸಿವೆ. ಆದರೆ, ಈ ಬಗ್ಗೆ ನಿರ್ಮಾಪಕರು ಮತ್ತು ವಿತರಕರು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯದಲ್ಲೇ ಈ ಕುರಿತು ಸ್ಪಷ್ಟನೆ ಸಿಗಲಿದೆ ಎಂದು ಟ್ರೇಡ್ ಮೂಲಗಳು ತಿಳಿಸಿವೆ ಎಂದು ವರದಿ ಆಗಿದೆ.

ಇದನ್ನೂ ಓದಿ: ವಿಶ್ವದಾದ್ಯಂತ 1500 ಕೋಟಿ ಗಳಿಸಿದ ‘ರಾಮಾಯಣ’; 2000 ಕೋಟಿ ಗಡಿ ತಲುಪುತ್ತಾ ರಣಬೀರ್-ಯಶ್ ಸಿನಿಮಾ?

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ (ರಾಮ), ಯಶ್ (ರಾವಣ), ಸಾಯಿ ಪಲ್ಲವಿ (ಸೀತೆ), ರವಿ ದುಬೆ (ಲಕ್ಷ್ಮಣ), ವಿವೇಕ್ ಒಬೆರಾಯ್, ಲಾರಾ ದತ್ತಾ ಮುಂತಾದವರು ನಟಿಸಿದ್ದಾರೆ. ನವೆಂಬರ್ 19ರ ಗುರುವಾರದ ವೇಳೆಗೆ ಈ ಚಿತ್ರ ಎಲ್ಲಾ ಭಾಷೆಗಳಿಂದ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us