ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: ಭಾರತದಲ್ಲೇ ಸಾವಿರ ಕೋಟಿ ರೂಪಾಯಿ ಸನಿಹ

ಭಾರತದ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಈಗಾಗಲೇ ಹಿಂದಿಕ್ಕಿದೆ. ಭಾರತದ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಶೀಘ್ರವೇ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ನಟ ರಣವೀರ್ ಸಿಂಗ್, ನಿರ್ದೇಶಕ ಆದಿತ್ಯ ಧರ್ ಅವರ ಖ್ಯಾತಿ ಈ ಸಿನಿಮಾದಿಂದ ಡಬಲ್ ಆಗಿದೆ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: ಭಾರತದಲ್ಲೇ ಸಾವಿರ ಕೋಟಿ ರೂಪಾಯಿ ಸನಿಹ
Ranveer Singh

Updated on: Apr 05, 2026 | 7:16 AM

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್ 2’ (Dhurandhar 2) ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಚಿತ್ರದ ಕಲೆಕ್ಷನ್‌ (Box Office Collection) ಚೆನ್ನಾಗಿಯೇ ಆಗುತ್ತಿದೆ. ಸದ್ಯ ಈ ಚಿತ್ರವು ಭಾರತ ಬಾಕ್ಸ್ ಆಫೀಸ್​​ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸುವತ್ತ ವೇಗವಾಗಿ ಮುನ್ನುಗ್ಗುತ್ತಿದೆ. ಈಗಾಗಲೇ 985 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು Sacnilk ವರದಿ ಮಾಡಿದೆ. ರಣವೀರ್ ಸಿಂಗ್ (Ranveer Singh) ಅವರು ಈ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡಿದ್ದಾರೆ.

ಲೇಟೆಸ್ಟ್ ಮಾಹಿತಿ ಪ್ರಕಾರ, 17ನೇ ದಿನವಾದ ಶನಿವಾರ (ಏಪ್ರಿಲ್ 4) ಈ ಸಿನಿಮಾ 25.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರದ ದಿನಗಳಲ್ಲಿ ಸಾಧಾರಣವಾಗಿದ್ದ ಕಲೆಕ್ಷನ್, ಮೂರನೇ ವಾರಾಂತ್ಯದಲ್ಲಿ ಮತ್ತೆ ಪುಟಿದೆದ್ದಿದೆ. ಮೊದಲ ವಾರದ ಅಂತ್ಯಕ್ಕೆ 674.17 ಕೋಟಿ ರೂಪಾಯಿ ಆಗಿತ್ತು. ಎರಡನೇ ವಾರ 263.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

ಈಗಾಗಲೇ ಭಾರತದ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಯನ್ನು ‘ಧುರಂಧರ್ 2’ ಹಿಂದಿಕ್ಕಿದೆ. ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ (859.70 ಕೋಟಿ), ರಾಜಮೌಳಿ ನಿರ್ದೇಶನ ‘ಆರ್​ಆರ್​ಆರ್​’ (782.20 ಕೋಟಿ) ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (646 ಕೋಟಿ) ಸಿನಿಮಾಗಳ ಒಟ್ಟು ಗಳಿಕೆಯನ್ನು ‘ಧುರಂಧರ್ 2’ ಸಿನಿಮಾ ಮೀರಿಸಿದೆ.

ಸದ್ಯ ‘ಧುರಂಧರ್ 2’ ಸಿನಿಮಾದ ಮುಂದೆ ಕೆಲವು ದೈತ್ಯ ಸಿನಿಮಾಗಳ ಕಲೆಕ್ಷನ್ ದಾಖಲೆ ಹಾಗೆಯೇ ಇದೆ. ಈ ಮೊದಲು ‘ಬಾಹುಬಲಿ 2’ ಸಿನಿಮಾ 1,030 ಕೋಟಿ ರೂಪಾಯಿ ಗಳಿಸಿತ್ತು. ‘ಪುಷ್ಪ 2’ ಸಿನಿಮಾ 1,234.10 ಕೋಟಿ ರೂಪಾಯಿ ಚಾಚಿಕೊಂಡಿತ್ತು. ಆ ಸಿನಿಮಾಗಳ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಅಳಿಸಿ ಹಾಕುತ್ತಾ ಇಲ್ಲವಾ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ

‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಹಮ್ಜಾ ಎಂಬ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಪಾಕಿಸ್ತಾನದ ಲಿಯಾರಿ ಗ್ಯಾಂಗ್‌ಗಳ ಒಳಗೆ ನುಗ್ಗಿ, ಅಲ್ಲಿನ ಭೂಗತ ಲೋಕ ಮತ್ತು ಭಾರತದ ಮೇಲೆ ಪ್ರಭಾವ ಬೀರುವ ಭಯೋತ್ಪಾದನಾ ಜಾಲವನ್ನು ಧ್ವಂಸ ಮಾಡುವ ಸಾಹಸಗಾಥೆ ಈ ಚಿತ್ರದಲ್ಲಿದೆ. ಸಿನಿಮಾದ ಮೊದಲ ಭಾಗವು ವಿಶ್ವಾದ್ಯಂತ 1,300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us