ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಬೆಳೆದಿದ್ದಾರೆ. ಅವರ ಬಗ್ಗೆ ದಿನಕ್ಕೊಂದು ಗಾಸಿಪ್ (Gossip) ಕೇಳಿಬರುತ್ತಿದೆ. ಎಲ್ಲದಕ್ಕೂ ಅವರು ಪ್ರತಿಕ್ರಿಯೆ ನೀಡೋದಿಲ್ಲ. ಆದರೆ ಕೆಲವು ವಿಚಾರಗಳಿಗೆ ಖಂಡಿತವಾಗಿ ಉತ್ತರ ನೀಡುತ್ತಾರೆ. ರಶ್ಮಿಕಾ ಮಂದಣ್ಣ ಮತ್ತು ನಟ ಟೈಗರ್ ಶ್ರಾಫ್ (Tiger Shroff) ಬಗ್ಗೆ ಕೆಲವು ದಿನಗಳಿಂದ ಒಂದು ಗುಸುಗುಸು ಹಬ್ಬಿತ್ತು. ಇಬ್ಬರೂ ಜೊತೆಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆ ಗಾಸಿಪ್ ನಿಜ ಎಂದು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಮತ್ತು ಟೈಗರ್ ಶ್ರಾಫ್ ಜೊತೆಯಾಗಿ ಇರುವ ಒಂದು ವಿಡಿಯೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಸೂಕ್ತ ಸ್ಪಷ್ಟನೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ಟೈಗರ್ ಶ್ರಾಫ್ ಅವರು ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ ಅದರಲ್ಲೊಂದು ಟ್ವಿಸ್ಟ್ ಇದೆ. ಸದ್ಯಕ್ಕೆ ಈ ಇವರಿಬ್ಬರು ತೆರೆ ಹಂಚಿಕೊಂಡಿರುವುದು ಯಾವುದೇ ಸಿನಿಮಾಗಾಗಿ ಅಲ್ಲ. ಬದಲಿಗೆ, ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ರಶ್ಮಿಕಾ ಮಂದಣ್ಣ ಅವರು ಖಚಿತ ಪಡಿಸಿದ್ದಾರೆ.
‘ಗಾಸಿಪ್ಗಳು ನಿಜವಾಗಿದೆ.. ನಾನು ಮತ್ತು ಟೈಗರ್ ಶ್ರಾಫ್ ಈಗ ತಾನೇ ಒಂದು ಜಾಹೀರಾತಿಗಾಗಿ ಶೂಟಿಂಗ್ ಮುಗಿಸಿದೆವು’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ‘ಟೈಗರ್ ಜೊತೆ ಕೆಲಸ ಮಾಡಿದ್ದು ಚೆನ್ನಾಗಿತ್ತು’ ಎಂದು ಕೂಡ ರಶ್ಮಿಕಾ ಹೇಳಿದ್ದಾರೆ. ಇಂಥ ಹಲವಾರು ಜಾಹೀರಾತುಗಳಲ್ಲಿ ಅವರು ನಟಿಸುತ್ತಿದ್ದಾರೆ. ಅನೇಕ ಕಂಪನಿಗಳಿಗೆ ರಾಯಭಾರಿ ಆಗಿರುವ ರಶ್ಮಿಕಾ ಮಂದಣ್ಣ ಅವರಿಗೆ ಅವುಗಳಿಂದ ಕೋಟ್ಯಂತರ ರೂಪಾಯಿ ಸಂಭಾವನೆ ಬರುತ್ತಿದೆ.
ಸದ್ಯ ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿ ಆಗಿದ್ದಾರೆ. ‘ಪುಷ್ಪ’ ಸಿನಿಮಾ ಗೆದ್ದ ಬಳಿಕ ಅವರಿಗೆ ಪ್ಯಾನ್ ಇಂಡಿಯಾ ಹೀರೋಯಿನ್ ಪಟ್ಟ ಸಿಕ್ಕಿತು. ಕೆಲವೇ ದಿನಗಳಲ್ಲಿ ‘ಪುಷ್ಪ 2’ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ತಮಿಳಿನಲ್ಲಿ ‘ದಳಪತಿ’ ವಿಜಯ್ ಜೊತೆಗಿನ ಚಿತ್ರಕ್ಕೂ ಅವರು ನಾಯಕಿ ಆಗಿದ್ದಾರೆ. ಬಾಲಿವುಡ್ನಲ್ಲಿ ಕೂಡ ಅವರಿಗೆ ಹಲವು ಆಫರ್ಗಳು ಸಿಗುತ್ತಿವೆ. ‘ಗುಡ್ಬೈ’, ‘ಮಿಷನ್ ಮಜ್ನು’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವುಗಳ ರಿಲೀಸ್ಗಾಗಿ ಫ್ಯಾನ್ಸ್ ಕಾದಿದ್ದಾರೆ.
Published On - 8:06 am, Tue, 12 July 22