
ಬಾಲಿವುಡ್ (Bollywood) ಸ್ಟಾರ್ ನಟ, ನಿರ್ಮಾಪಕರ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ. ದಕ್ಷಿಣ ಭಾರತವನ್ನು ಗುರಿಯಾಗಿರಿಸಿಕೊಂಡು ಸಿನಿಮಾ ನಿರ್ಮಿಸಲಾಗುತ್ತಿದೆ, ಪ್ರಚಾರಕ್ಕೆ ಕಡ್ಡಾಯವಾಗಿ ದಕ್ಷಿಣ ಭಾರತಕ್ಕೆ ಬಾಲಿವುಡ್ ಮಂದಿ ಬರುತ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರನ್ನು ಎರವಲು ಪಡೆದು ಬಾಲಿವುಡ್ ಸ್ಟಾರ್ ನಟರು ಸಿನಿಮಾ ನಿರ್ದೇಶನ ಮಾಡಿಸಿಕೊಳ್ಳುತ್ತಿದ್ದಾರೆ. ಇದೀಗ ದಕ್ಷಿಣ ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಸಹ ಮುಂದಾಗಿದ್ದಾರೆ.
ಇತ್ತೀಚೆಗಷ್ಟೆ ಬಾಲಿವುಡ್ನ ಸ್ಟಾರ್ ನಟ ಅಜಯ್ ದೇವಗನ್ ಅವರು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಸ್ಟುಡಿಯೋ ನಿರ್ಮಾಣ ಮಾಡಲು ಮೆಮೊರಾಂಡಮ್ ಮಾಡಿಕೊಂಡಿದ್ದರು. ಅಜಯ್ ದೇವಗನ್ ಅವರು ಹೈದರಾಬಾದ್ನಲ್ಲಿ ವಿಎಫ್ಎಕ್ಸ್ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದ್ದರು. ಇದೀಗ ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಹಣವನ್ನು ಹೈದರಾಬಾದ್ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಸಲ್ಮಾನ್ ಖಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಹೈದರಾಬಾದ್ನಲ್ಲಿ ಭಾರಿ ಹೂಡಿಕೆ ಆಗಲಿದೆ. ಹೈದರಾಬಾದ್ ಹೊರವಲಯದಲ್ಲಿ ಭಾರಿ ದೊಡ್ಡ ಟೌನ್ಶಿಪ್ ನಿರ್ಮಾಣಕ್ಕೆ ಸಲ್ಮಾನ್ ಖಾನ್ ಮುಂದಾಗಿದ್ದಾರೆ. ಈ ಟೌನ್ಶಿಪ್ ಗಾಲ್ಫ್ ಕೋರ್ಸ್, ರೇಸ್ ಕೋರ್ಸ್, ಹೈ ಎಂಡ್ ಸೌಲಭ್ಯಗಳು, ಕೃತಕ ಅರಣ್ಯ, ಹೈ ಎಂಡ್ ಪಾರ್ಕ್ಗಳು ಇನ್ನೂ ಹಲವು ಸೌಲಭ್ಯಗಳನ್ನು ಒಳಗೊಂಡಿರಲಿವೆ. ಐಶಾರಾಮಿ ಟೌನ್ಶಿಪ್ ಜೊತೆಗೆ ಭಾರಿ ದೊಡ್ಡ ಸಿನಿಮಾ ಸ್ಟುಡಿಯೋ ನಿರ್ಮಾಣಕ್ಕೂ ಸಹ ಸಲ್ಮಾನ್ ಖಾನ್ ಮುಂದಾಗಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಗ್ಯಾಂಗ್ ಸೇರಿದ ತಮನ್ನಾ ಭಾಟಿಯಾ, ಸೊನಾಕ್ಷಿ ಸಿನ್ಹಾ ಔಟ್
ಹೈದರಾಬಾದ್ ನಲ್ಲಿ ಈಗಾಗಲೇ ಕೆಲವಾರು ದೊಡ್ಡ ಸಿನಿಮಾ ಸ್ಟುಡಿಯೋಗಳಿವೆ. ಇದರ ನಡುವೆ ಸಲ್ಮಾನ್ ಖಾನ್ ಇನ್ನೂ ಅತ್ಯಾಧುನಿಕ ತಂತ್ರಜ್ಞಾನವುಲ್ಳ, ಸೌಕರ್ಯಗಳುಳ್ಳ ಸಿನಿಮಾ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಸೌಕರ್ಯಗಳ ಜೊತೆಗೆ ಪೋಸ್ಟ್ ಪ್ರೊಡಕ್ಷನ್, ಪ್ರೀ ಪ್ರೊಡಕ್ಷನ್ಗಳ ಜೊತೆಗೆ ತರಬೇತಿ ಕಾರ್ಯಾಗಾರಗಳಿಗೂ ಸಹ ಈ ಸ್ಟುಡಿಯೋನಲ್ಲಿ ವ್ಯವಸ್ಥೆ ಇರಲಿದೆಯಂತೆ. ಸಿನಿಮಾ ತಂಡವೊಂದು ಸ್ಟುಡಿಯೋದ ಒಳಹೊಕ್ಕರೆ ಇಡೀ ಸಿನಿಮಾವನ್ನು ಇಲ್ಲಿಯೇ ಮುಗಿಸಿಕೊಂಡು ಹೊರಬರಬಹುದು.
ತೆಲಂಗಾಣ ಸರ್ಕಾರ ಸಹ, ಹೈದರಾಬಾದ್ ಅನ್ನು ವಿಶ್ವಫಿಲಂ ಸಿಟಿಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ. ಇದೇ ಕಾರಣಕ್ಕೆ ಸಿನಿಮಾ ಸಂಭಂಧಿ ಹೂಡಿಕೆಗಳನ್ನು ಸ್ವಾಗತಿಸುತ್ತಿದೆ. ವಿಶ್ವ ಗುಣಮಟ್ಟದ ತಂತ್ರಜ್ಞಾನವನ್ನು, ಸವಲತ್ತುಗಳನ್ನು ಹೈದರಾಬಾದ್ಗೆ ತರಬೇಕೆನ್ನುವ ಗುರಿಯನ್ನು ತೆಲಂಗಾಣ ಸರ್ಕಾರ ಹೊಂದಿದ್ದು, ಇದೀಗ ಹೈದರಾಬಾದ್ನಲ್ಲಿ ನಡೆಯುತ್ತಿರುವ ‘ಹೈದರಾಬಾದ್ ವಿಷನ್ 2047’ ನಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ