ಹಲವು ಅಡೆತಡೆಗಳ ಬಳಿಕ ಸಲ್ಮಾನ್ ಖಾನ್ ‘ಮಾತೃಭೂಮಿ’ ಚಿತ್ರಕ್ಕೆ ಸಿಕ್ತು ಸೆನ್ಸಾರ್ ಗ್ರೀನ್ ಸಿಗ್ನಲ್
‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಸಿನಿಮಾಗೆ ಯು/ಎ 16+ ಪ್ರಮಾಣಪತ್ರ ನೀಡಲಾಗಿದೆ. ಸಲ್ಮಾನ್ ಖಾನ್ ನಟಿಸಿರುವ ಈ ಸಿನಿಮಾದ ಬಿಡುಗಡೆಗೆ ಈ ಮೊದಲು ಸಾಕಷ್ಟು ವಿಘ್ನಗಳು ಎದುರಾಗಿದ್ದವು. ಈಗ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ’ ಸಿನಿಮಾಗೆ ಹಲವು ತಿಂಗಳುಗಳ ಅಡೆತಡೆಗಳ ನಂತರ ಕೊನೆಗೂ ಸೆನ್ಸಾರ್ ಮಂಡಳಿಯಿಂದ ಅನುಮತಿ ದೊರೆತಿದೆ. ಚಿತ್ರಕ್ಕೆ ಯು/ಎ 16+ ಪ್ರಮಾಣಪತ್ರ ನೀಡಲಾಗಿದ್ದು, ಬಿಡುಗಡೆಗೆ ಇದ್ದ ಎಲ್ಲಾ ಅಡ್ಡಿಗಳು ನಿವಾರಣೆಯಾಗಿವೆ. 2020ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಆರಂಭದಲ್ಲಿ ‘ಮಾತೃಭೂಮಿ’ ಚಿತ್ರಕ್ಕೆ ‘ಬ್ಯಾಟಲ್ ಆಫ್ ಗಾಲ್ವಾನ್’ ಎಂದು ಹೆಸರಿಡಲಾಗಿತ್ತು.
ಈ ವರ್ಷದ ಆರಂಭದಲ್ಲಿ ‘ಮಾತೃಭೂಮಿ’ ಎಂದು ಮರುನಾಮಕರಣ ಮಾಡಲಾಯಿತು. ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರದಲ್ಲಿನ ಕೆಲವು ಅಂಶಗಳು ಮತ್ತು ಚೀನಾದ ಉಲ್ಲೇಖಗಳ ಕುರಿತು ಚಿತ್ರತಂಡ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಕಳೆದ ತಿಂಗಳಷ್ಟೇ ಸರ್ಕಾರದಿಂದ ಹಸಿರು ನಿಶಾನೆ ಪಡೆದಿದ್ದ ಈ ಚಿತ್ರಕ್ಕೆ, ನವೆಂಬರ್ 18ರಂದು ಸೆನ್ಸಾರ್ ಮಂಡಳಿ ಅಧಿಕೃತವಾಗಿ ಪ್ರಮಾಣಪತ್ರ ನೀಡಿದೆ.
ಸೆನ್ಸಾರ್ ಮಂಡಳಿಯ ವೆಬ್‌ಸೈಟ್ ಮಾಹಿತಿಯ ಪ್ರಕಾರ, ‘ಮಾತೃಭೂಮಿ’ ಚಿತ್ರದ ಒಟ್ಟು ಅವಧಿ 154.12 ನಿಮಿಷಗಳಾಗಿದೆ. ಅಂದರೆ, ಈ ಸಿನಿಮಾ 2 ಗಂಟೆ, 34 ನಿಮಿಷ ಮತ್ತು 12 ಸೆಕೆಂಡ್‌ಗಳ ಕಾಲಾವಧಿಯನ್ನು ಹೊಂದಿದೆ. ಕಳೆದ 12-13 ವರ್ಷಗಳಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳ ಅವಧಿಯಂತೆಯೇ ಈ ಚಿತ್ರವೂ ಮೂಡಿಬಂದಿದೆ.
ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಚಿತ್ರಾಂಗದಾ ಸಿಂಗ್, ಅಂಕುರ್ ಭಾಟಿಯಾ, ಹೀರಾ ಸೊಹಾಲ್, ದಯಾಶಂಕರ್ ಪಾಂಡೆ, ಜೇಸನ್ ಥಾಮ್, ಅಭಿಲಾಷ್ ಚೌಧರಿ, ವಿಪಿನ್ ಭಾರದ್ವಾಜ್, ಸಮರ್ ಗಿಲ್, ತೆನ್ಜಿನ್ ಬೋಧ್, ತಾನ್ಯಾ ದೇಸಾಯಿ, ಜೇನ್ ಶಾ, ಅಭಿಶ್ರೀ ಸೇನ್ ಸೇರಿದಂತೆ ದೊಡ್ಡ ತಾರಾಗಣವಿದೆ.
ಇದನ್ನೂ ಓದಿ: ‘ಮಾತೃಭೂಮಿ’ ಚಿತ್ರತಂಡಕ್ಕೆ ಲಕ್ಷಾಂತರ ರೂ. ಬೆಲೆಯ ವಾಚ್ ಉಡುಗೊರೆ ನೀಡಿದ ಸಲ್ಮಾನ್ ಖಾನ್
ಜಿಯೋ ಸ್ಟುಡಿಯೋಸ್ ಸಂಸ್ಥೆಯು ‘ಮಾತೃಭೂಮಿ’ ಚಿತ್ರವನ್ನು ಭಾರತದಾದ್ಯಂತ ವಿತರಣೆ ಮಾಡುತ್ತಿದ್ದು, ಡಿಸೆಂಬರ್ 4ರಂದು ‘ಮಾತೃಭೂಮಿ’ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ವರ್ಷ ಬಿಡುಗಡೆ ಆಗುತ್ತಿರುವ ಸಲ್ಮಾನ್ ಖಾನ್ ಅವರ ಏಕೈಕ ಸಿನಿಮಾ ಇದಾಗಿದೆ. ಆ ಕಾರಣದಿಂದ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




