ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅವರ ಆಪ್ತ ಬಾಬಾ ಸಿದ್ಧಿಕಿ ಹತ್ಯೆ ಆಯಿತು. ಆ ಬಳಿಕ ಸಲ್ಮಾನ್ ಖಾನ್ ಅವರಿಗೂ ಕೊಲೆ ಬೆದರಿಕೆ ಹಾಕಲಾಯಿತು. ಈ ಕಾರಣದಿಂದ ಸಲ್ಮಾನ್ ಖಾನ್ ಅವರ ಆಪ್ತರಿಗೆ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ. ಜೀವ ಬೆದರಿಕೆ ಇದೆ ಎಂದ ಮಾತ್ರಕ್ಕೆ ಸಲ್ಮಾನ್ ಖಾನ್ ಅವರು ಸುಮ್ಮನೆ ಮನೆಯಲ್ಲಿ ಕುಳಿತಿರಲು ಸಾಧ್ಯವಿಲ್ಲ. ಅವರು ಸಿನಿಮಾ ಹಾಗೂ ಬಿಗ್ ಬಾಸ್ ಶೂಟಿಂಗ್ನಲ್ಲಿ ಭಾಗವಹಿಸಲೇಬೇಕು. ಹಾಗಾಗಿ ಅವರ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ವರದಿಗಳ ಪ್ರಕಾರ, ಒಟ್ಟು 70 ಜನರು ಸಲ್ಮಾನ್ ಖಾನ್ ಅವರ ರಕ್ಷಣೆಗೆ ನಿಂತಿದ್ದಾರೆ.
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗಿದ್ದಾರೆ. ಖ್ಯಾತ ನಿರ್ದೇಶಕ ಮುರುಗದಾಸ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಮುಂದಿನ ಹಂತದ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯಲಿದೆ. ನಗರದಲ್ಲಿ 2 ಸೆಟ್ ಹಾಕಲಾಗಿದೆ. ಇನ್ನುಳಿದ ಭಾಗದ ಚಿತ್ರೀಕರಣ ಖಾಸಗಿ ಹೋಟೆಲ್ನಲ್ಲಿ ನಡೆಯಲಿದೆ. ಈ ಎಲ್ಲ ಜಾಗಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ಖಾಸಗಿ ಹೋಟೆಲ್ನ ಒಂದು ಭಾಗದಲ್ಲಿ ಮಾತ್ರ ಶೂಟಿಂಗ್ ನಡೆಯಲಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಇಡೀ ಹೋಟೆಲ್ ಅನ್ನು ಸಲ್ಮಾನ್ ಖಾನ್ ಅವರ ಸೆಕ್ಯೂರಿಟಿ ಟೀಮ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹೋಟೆಲ್ಗೆ ಬರುವ ಎಲ್ಲರ ಗುರುತು ಮತ್ತು ಹಿನ್ನೆಲೆಯನ್ನು ಸೂಕ್ತವಾಗಿ ಪರಿಶೀಲಿಸಲಾಗುತ್ತದೆ. ಹೋಟೆಲ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ನಂತರ ಎರಡನೇ ಹಂತದಲ್ಲಿ ಸಲ್ಮಾನ್ ಖಾನ್ ಅವರ ಖಾಸಗಿ ಭದ್ರತಾ ತಂಡ ಕೂಡ ತಪಾಸಣೆ ಮಾಡಲಿದೆ.
ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ನಟ ಸಲ್ಮಾನ್ ಖಾನ್ಗೆ ಮತ್ತೆ ಕೊಲೆ ಬೆದರಿಕೆ
ಶೂಟಿಂಗ್ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದರೆ ‘ಸಿಕಂದರ್’ ಚಿತ್ರತಂಡಕ್ಕೆ ಕಪ್ಪು ಚುಕ್ಕಿ ಆಗಲಿದೆ. ಆ ಕಾರಣದಿಂದ ಚಿತ್ರತಂಡದವರು ಹೆಚ್ಚಿನ ಜಾಗ್ರತೆ ವಹಿಸುತ್ತಿದ್ದಾರೆ. ಎನ್ಎಸ್ಜಿ ಕಮಾಂಡೋಗಳು, ಪೊಲೀಸ್ ಅಧಿಕಾರಿಗಳು, ಖಾಸಗಿ ಸೆಕ್ಯೂರಿಟಿ ಸಿಬ್ಬಂದಿ ಸೇರಿದಂತೆ ಒಟ್ಟು 70 ಜನರು ಸಲ್ಮಾನ್ ಖಾನ್ ಅವರ ರಕ್ಷಣೆಗೆ ನಿಂತಿದ್ದಾರೆ. ಇನ್ನು, ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರ ಕೂಡ ಕೆಲವು ಅತ್ಯುತ್ತಮ ಬಾಡಿಗಾರ್ಡ್ಗಳನ್ನು ಆಯ್ಕೆ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸುದ್ದಿ ಆಗಿದೆ. ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಸಲ್ಮಾನ್ ಖಾನ್ ಅವರಿಗೆ ಅಪಾಯ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.