7 ವರ್ಷದ ಮಗನಿಗೆ ‘ಅನಿಮಲ್​’ ಸಿನಿಮಾ ತೋರಿಸಿದ ಸಂದೀಪ್​ ರೆಡ್ಡಿ ವಂಗ

‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆದ ನಂತರ ಸಂದೀಪ್​ ರೆಡ್ಡಿ ವಂಗ ಅವರು ಕೆಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಒಂದಷ್ಟು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪತ್ನಿ ಹಾಗೂ ಮಗನಿಗೆ ‘ಅನಿಮಲ್​’ ಸಿನಿಮಾವನ್ನು ಸಂದೀಪ್​ ತೋರಿಸಿದ್ದಾರೆ. ಕುಟುಂಬದವರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ ಎಂಬುದನ್ನು ಅವರು ತಿಳಿಸಿದ್ದಾರೆ.

7 ವರ್ಷದ ಮಗನಿಗೆ ‘ಅನಿಮಲ್​’ ಸಿನಿಮಾ ತೋರಿಸಿದ ಸಂದೀಪ್​ ರೆಡ್ಡಿ ವಂಗ
ರಣಬೀರ್​ ಕಪೂರ್​, ಸಂದೀಪ್​ ರೆಡ್ಡಿ ವಂಗ

Updated on: Feb 07, 2024 | 6:03 PM

ಕಳೆದ ವರ್ಷ ತೆರೆಕಂಡ ‘ಅನಿಮಲ್​​’ (Animal Movie) ಚಿತ್ರದ ಅನೇಕ ದೃಶ್ಯಗಳಿಗೆ ವಿಮರ್ಶಕರಿಂದ ತಕರಾರು ವ್ಯಕ್ತವಾಗಿತ್ತು. ಹಾಗಿದ್ದರೂ ಕೂಡ ಈ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸುಮಾರು 900 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಈ ಸಿನಿಮಾ ಯಶಸ್ವಿ ಆಯಿತು. ಈಗ ಒಟಿಟಿಗೆ ಕಾಲಿಟ್ಟು ‘ಅನಿಮಲ್​’ ಚಿತ್ರ ಸದ್ದು ಮಾಡುತ್ತಿದೆ. ನಿರ್ದೇಶಕ ಸಂದೀಪ್​ ರೆಡ್ಡಿ ವಂಗ (Sandeep Reddy Vanga) ಅವರ ಕೆಲಸ ಕೆಲವರಿಗೆ ಇಷ್ಟ ಆಗಿದೆ. ಇನ್ನೂ ಕೆಲವರಿಗೆ ಈ ಸಿನಿಮಾ ನೋಡಿ ಬೇಸರ ಆಗಿದೆ. ಆಕ್ಷೇಪಾರ್ಹ ದೃಶ್ಯಗಳು ಇವೆ ಎಂಬುದು ಹಲವರ ದೂರು. ಈ ಸಿನಿಮಾವನ್ನು ಮಕ್ಕಳು ನೋಡುವಂತಿಲ್ಲ. ಹಾಗಿದ್ದರೂ ಕೂಡ ತಮ್ಮ 7 ವರ್ಷದ ಮಗನಿಗೆ ನಿರ್ದೇಶಕ ಸಂದೀಪ್​ ಅವರು ‘ಅನಿಮಲ್​’ ಸಿನಿಮಾವನ್ನು ತೋರಿಸಿದ್ದಾರೆ. ಆದರೆ ಅವರು ಸಿನಿಮಾದ ಎಲ್ಲ ದೃಶ್ಯಗಳನ್ನು ತೋರಿಸಿಲ್ಲ!

ಅತಿಯಾದ ಕ್ರೌರ್ಯ, ಅಶ್ಲೀಲ ಬೈಗುಳ ಹಾಗೂ ಮಹಿಳೆಯರನ್ನು ನಿಂದಿಸುವಂತಹ ದೃಶ್ಯಗಳು ‘ಅನಿಮಲ್​’ ಸಿನಿಮಾದಲ್ಲಿ ಇವೆ. ಸೆನ್ಸಾರ್​ ಮಂಡಳಿ ಈ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಿದೆ. ಅಂದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರೇಕ್ಷಕರು ಈ ಸಿನಿಮಾವನ್ನು ನೋಡುವಂತಿಲ್ಲ. ಹಾಗಾಗಿ ಚಿತ್ರದಲ್ಲಿನ ಎಲ್ಲ ‘ಎ’ ರೇಟೆಡ್​​ ದೃಶ್ಯಗಳನ್ನು ಹೊರತುಪಡಿಸಿ ಇನ್ನುಳಿದ ಸಿನಿಮಾವನ್ನು ಸಂದೀಪ್​ ರೆಡ್ಡಿ ವಂಗ ಅವರು ತಮ್ಮ ಮಗನಿಗೆ ತೋರಿಸಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಭೇಟಿ ಮಾಡಿದ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ; ಫೋಟೋ ವೈರಲ್​

ಮಗನಿಗೆ ಸಂದೀಪ್​ ರೆಡ್ಡಿ ವಂಗ ಅವರು ಅರ್ಜುನ್​ ರೆಡ್ಡಿ ಎಂದು ಹೆಸರು ಇಟ್ಟಿದ್ದಾರೆ. ಆತನಿಗೆ ‘ಅನಿಮಲ್​’ ಸಿನಿಮಾ ತುಂಬ ಇಷ್ಟವಾಗಿದೆಯಂತೆ. ಅದೇ ರೀತಿ, ಪತ್ನಿಗೂ ಅವರು ಸಿನಿಮಾ ತೋರಿಸಿದ್ದಾರೆ. ಸ್ತ್ರೀ ವಿರೋಧಿ ಎನಿಸುವಂತಹ ಯಾವುದೇ ಅಂಶ ಇಲ್ಲ ಎಂಬ ಅಭಿಪ್ರಾಯ ತಮ್ಮ ಪತ್ನಿಯಿಂದ ಬಂತು ಎಂದು ಸಂದೀಪ್​ ರೆಡ್ಡಿ ವಂಗ ಹೇಳಿದ್ದಾರೆ. ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಸಿನಿಮಾ ನೋಡಿದ ಅನೇಕರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್​, ಅನಿಲ್​ ಕಪೂರ್​ ಮುಂತಾದವರು ನಟಿಸಿದ ‘ಅನಿಮಲ್​’ ಸಿನಿಮಾವನ್ನು ಅನೇಕರು ಟೀಕಿಸಿದ್ದಾರೆ. ಅಂಥ ಟೀಕೆಗಳ ಬಗ್ಗೆ ಸಂದೀಪ್​ ರೆಡ್ಡಿ ವಂಗ ತಲೆ ಕೆಡಿಸಿಕೊಂಡಿಲ್ಲ. ಜಾವೇದ್​ ಅಖ್ತರ್​ ಅವರು ‘ಅನಿಮಲ್​’ ಚಿತ್ರವನ್ನು ಖಂಡಿಸಿದ್ದಾರೆ. ಅಂತಹ ಕೆಲವು ಕಟು ವಿಮರ್ಶೆಗಳಿಗೆ ಸಂದೀಪ್​ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ ಜತೆ ಕಾಮಿಡಿ ಸಿನಿಮಾ ಮಾಡುವ ಹಂಬಲದಲ್ಲಿ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ

‘ಅನಿಮಲ್​’ ಗೆದ್ದ ಬಳಿಕ ಸಂದೀಪ್​ ರೆಡ್ಡಿ ವಂಗ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಇಂತಹ ಒಂದಷ್ಟು ಇಂಟರೆಸ್ಟಿಂಗ್​ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್​ ಖಾನ್​, ಕಂಗನಾ ರಣಾವತ್​, ರಣವೀರ್​ ಸಿಂಗ್​ ಮುಂತಾದವರ ಜೊತೆ ಸಿನಿಮಾ ಮಾಡಬೇಕು ಎಂದು ಅವರು ಆಸೆ ವ್ಯಕ್ತಪಡಿಸಿದ್ದಾರೆ. ಸಂದೀಪ್​ ಜೊತೆ ಕೆಲಸ ಮಾಡಲು ಅಲ್ಲು ಅರ್ಜುನ್​, ಮಹೇಶ್​ ಬಾಬು, ಪ್ರಭಾಸ್​ ಮುಂತಾದ ಕಲಾವಿದರು ಸಿದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us