
ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ಅಷ್ಟಿಷ್ಟಲ್ಲ. ಹಲವು ಸಿನಿಮಾಗಳು ಸೋತರೂ ಕೂಡ ಅವರ ಮೇಲೆ ಜನರು ಇಟ್ಟಿರುವ ಅಭಿಮಾನ ಕಡಿಮೆ ಆಗಿಲ್ಲ. ಪ್ರತಿ ವರ್ಷ ಅವರ ಹುಟ್ಟುಹಬ್ಬದ ದಿನ ಮನೆ ಎದುರು ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಕಿಂಗ್ ಖಾನ್ ಅವರ ‘ಮನ್ನತ್’ (Mannat) ನಿವಾಸಕ್ಕೆ ವಿಶೇಷ ಆಕರ್ಷಣೆ ಇದೆ. ಈ ಐಷಾರಾಮಿ ಬಂಗಲೆ ಯಾವ ಅರಮನೆಗೂ ಕಮ್ಮಿ ಇಲ್ಲ. ಮುಂಬೈ ಮಹಾನಗರದಲ್ಲಿ ‘ಮನ್ನತ್’ ಕಟ್ಟಡಕ್ಕೆ ಅದರದ್ದೇ ಆದ ಮೆರುಗು ಇದೆ. ಆಗಾಗ ಬಾಲಿವುಡ್ ಸೆಲೆಬ್ರಿಟಿಗಳು ಈ ಬಂಗಲೆಯಲ್ಲಿ ಪಾರ್ಟಿ ಮಾಡುತ್ತಾರೆ. ಈಗ ಶಾರುಖ್ ಖಾನ್ ಮನೆ ಬಗ್ಗೆ ಹೊಸ ಅಪ್ಡೇಟ್ ಕೇಳಿಬಂದಿದೆ. ಮನ್ನತ್ ನಿವಾಸದ ಗೇಟಿಗೆ ವಜ್ರದ (Diamond) ಅಲಂಕಾರ ಮಾಡಲಾಗಿದೆ. ಅದರ ಫೋಟೋಗಳು ಕೂಡ ವೈರಲ್ ಆಗಿವೆ.
ಶಾರುಖ್ ಖಾನ್ ಅವರ ಫ್ಯಾನ್ ಪೇಜ್ಗಳಲ್ಲಿ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಕಿಂಗ್ ಖಾನ್ ನಿವಾಸದ ಮುಖ್ಯ ದ್ವಾರದಲ್ಲಿ ‘ಮನ್ನತ್’ ಎಂದು ನೇಮ್ ಪ್ಲೇಟ್ ಹಾಕಿಸಲಾಗಿದೆ. ಅದನ್ನು ವಜ್ರದಿಂದ ಅಲಂಕರಿಸಲಾಗಿದೆ. ಈ ವೈಭೋಗ ಕಂಡು ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ವಜ್ರಖಚಿತ ನೇಮ್ಪ್ಲೇಟ್ ಹೊಂದಿರುವ ಕಾರಣದಿಂದ ‘ಮನ್ನತ್’ ಈಗ ಇನ್ನಷ್ಟು ಆಕರ್ಷಕವಾಗಿದೆ.
2018ರಲ್ಲಿ ಬಂದ ‘ಜೀರೋ’ ಸಿನಿಮಾ ಹೀನಾಯವಾಗಿ ಸೋತ ಬಳಿಕ ಶಾರುಖ್ ಖಾನ್ ಅವರು ಒಂದು ಗ್ಯಾಪ್ ತೆಗೆದುಕೊಂಡರು. ಆದರೆ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಜವಾನ್’, ‘ಡಂಕಿ’, ‘ಪಠಾಣ್’ ಮುಂತಾದ ಸಿನಿಮಾಗಳಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಅವರ ಕಮ್ಬ್ಯಾಕ್ ಸಿನಿಮಾವನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ನವೆಂಬರ್ 2ರಂದು ಶಾರುಖ್ ಖಾನ್ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಈ ಖುಷಿಯನ್ನು ಹೆಚ್ಚಿಸಲು ‘ಪಠಾಣ್’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಈ ಟೀಸರ್ನಲ್ಲಿ ಅವರ ಭರ್ಜರಿ ಆ್ಯಕ್ಷನ್ ಅವತಾರ ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
‘ಪಠಾಣ್’ ಚಿತ್ರ 2023ರ ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾಗಾಗಿ ಶಾರುಖ್ ಅವರು ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ. ಸಿಕ್ಸ್ ಪ್ಯಾಕ್ಸ್ ಗೆಟಪ್ನಲ್ಲಿ ಫೈಟ್ ಮಾಡಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:49 am, Mon, 21 November 22