
ನಟ ಶಾರುಖ್ ಖಾನ್ (Shah Rukh Khan) ಅವರು ಭರ್ಜರಿ ಕಮ್ಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ. ಅವರಿಗೆ ಕ್ರಿಕೆಟ್ ಬಗ್ಗೆಯೂ ಸಖತ್ ಆಸಕ್ತಿ ಇದೆ. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup) ನಡೆಯುತ್ತಿದೆ. ಭಾನುವಾರ (ಅ.23) ನಡೆದ ಪಂದ್ಯದಲ್ಲಿ ವಿರಾಟ ಕೊಹ್ಲಿ (Virat Kohli) ಪರಾಕ್ರಮ ಮೆರೆದಿದ್ದಾರೆ. ಅವರು ಬ್ಯಾಟ್ ಬೀಸಿದ ವೈಖರಿಗೆ ಎಂಥವರೂ ಸೆಲ್ಯೂಟ್ ಹೊಡೆಯಲೇಬೇಕು. ಇನ್ನೇನು ಕೈ ತಪ್ಪಿಹೋಯಿತು ಎಂಬಂತಿದ್ದ ಪಂದ್ಯವನ್ನು ಗೆಲುವಿನ ದಡಕ್ಕೆ ಸೇರಿಸಿದ ವಿರಾಟ್ ಕೊಹ್ಲಿಗೆ ಎಲ್ಲರೂ ಭೇಷ್ ಎಂದಿದ್ದಾರೆ. ಶಾರುಖ್ ಖಾನ್ ಕೂಡ ಕೊಹ್ಲಿ ಆಟಕ್ಕೆ ಮನಸೋತಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಶಾರುಖ್ ಖಾನ್ ಅವರು ಟ್ವಿಟರ್ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇಂಡಿಯಾ-ಪಾಕಿಸ್ತಾನ ಪಂದ್ಯ ನೋಡಿ ಖುಷಿ ಆಗಿರುವ ಅವರು, ಭಾರತದ ಆಟಗಾರರನ್ನು ಮನಸಾರೆ ಹೊಗಳಿದ್ದಾರೆ. ಭಾರತ ಗೆದ್ದಾಗ ಸ್ಟೇಡಿಯಂನಲ್ಲಿ ಮೊಳಗಿದ ‘ಚಕ್ ದೇ ಇಂಡಿಯಾ..’ ಹಾಡಿನಿಂದಾಗಿ ಶಾರುಖ್ಗೆ ಇನ್ನಷ್ಟು ರೋಮಾಂಚನ ಆಗಿದೆ. ಆ ಬಗ್ಗೆಯೂ ಅವರು ಟ್ವೀಟ್ನಲ್ಲಿ ಪ್ರಸ್ತಾಪ ಮಾಡಿದ್ದಾರೆ.
‘ಕ್ರಿಕೆಟ್ನ ಈ ಅತ್ಯುತ್ತಮ ಪಂದ್ಯ ನೋಡಲು ಖುಷಿ ಆಯಿತು. ಭಾರತದ ಗೆಲುವನ್ನು ನೋಡಿ ಅದ್ಭುತ ಎನಿಸಿತು. ವಿರಾಟ್ ಕೊಯ್ಲಿ ಅವರದ್ದು ಬ್ರಿಲಿಯಂಟ್ ಬ್ಯಾಟಿಂಗ್. ಅವರ ನಗು-ಅಳುವನ್ನು ನೋಡುವುದು ಸ್ಫೂರ್ತಿದಾಯಕವಾಗಿತ್ತು. ಹಿನ್ನೆಲೆಯಲ್ಲಿ ಚಕ್ ದೇ ಇಂಡಿಯಾ ಹಾಡು! ಖುಷಿಯ ದೀಪಾವಳಿ ಈಗ ಶುರು ಆಯಿತು’ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಶಾರುಖ್ ಖಾನ್ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಅವರು ನಟಿಸಿದ ‘ಜೀರೋ’ ಸಿನಿಮಾ 2018ರಲ್ಲಿ ಬಿಡುಗಡೆಯಾಗಿ ಸೋತಿತು. ಆ ಬಳಿಕ ಅವರ ಯಾವುದೇ ಚಿತ್ರ ತೆರೆಕಂಡಿಲ್ಲ. ಈಗ ಅವರು ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. 2023ರಲ್ಲಿ ಅವರ ಮೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಲಿವೆ. ಹಾಗಾಗಿ 2023ರ ಪೂರ್ತಿ ವರ್ಷ ಶಾರುಖ್ ಪಾಲಿಗೆ ವಿಶೇಷವಾಗಿರಲಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ತುರ್ತಾಗಿ ಒಂದು ಗೆಲುವು ಪಡೆಯಬೇಕು ಎಂಬ ಕಾರಣಕ್ಕೆ ಶಾರುಖ್ ಖನ್ ಅವರು ಒಳ್ಳೊಳ್ಳೆಯ ನಿರ್ದೇಶಕ ಜೊತೆ ಕೈ ಜೋಡಿಸುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್ ಅಟ್ಲಿ ಜೊತೆ ‘ಜವಾನ್’, ಬಾಲಿವುಡ್ನ ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ಜೊತೆ ‘ಡಂಕಿ’ ಹಾಗೂ ಸಿದ್ದಾರ್ಥ್ ಆನಂದ್ ಜೊತೆ ‘ಪಠಾಣ್’ ಚಿತ್ರವನ್ನು ಶಾರುಖ್ ಮಾಡುತ್ತಿದ್ದಾರೆ. ಈ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.