ಜವಾನ್ ಸಿನಿಮಾ ಟ್ರೈಲರ್ ಬಿಡುಗಡೆಗೆ ಭರ್ಜರಿ ಯೋಜನೆ ಮಾಡಿರುವ ಶಾರುಖ್ ಖಾನ್

Shah Rukh Khan: ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಟ್ರೈಲರ್ ಗೆ ಯುಎ ಪ್ರಮಾಣ ಪತ್ರ ದೊರೆತಿದ್ದು, ಟ್ರೈಲರ್ ಬಿಡುಗಡೆಗೆ ಭರ್ಜರಿ ಯೋಜನೆ ಹಾಕಿಕೊಂಡಿದ್ದಾರೆ ಶಾರುಖ್ ಖಾನ್.

ಜವಾನ್ ಸಿನಿಮಾ ಟ್ರೈಲರ್ ಬಿಡುಗಡೆಗೆ ಭರ್ಜರಿ ಯೋಜನೆ ಮಾಡಿರುವ ಶಾರುಖ್ ಖಾನ್
ಜವಾನ್

Updated on: Jul 07, 2023 | 5:52 PM

ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathaan) ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದ್ದು ಇದೀಗ ಅವರ ಮುಂದಿನ ಸಿನಿಮಾಗಳ ಬಗೆಗೆ ನಿರೀಕ್ಷೆ ಹೆಚ್ಚಾಗಿದೆ. ಅವರ ಮುಂದಿನ ಸಿನಿಮಾ ಆಗಿರುವ ಜವಾನ್, ಹಲವು ಮಾಸ್ ಎಲಿಮೆಂಟ್​ಗಳನ್ನು ಹೊಂದಿರಲಿದೆ ಎಂಬುದನ್ನು ಟೀಸರ್ ಹಾಗೂ ಪೋಸ್ಟರ್​ಗಳು ಈಗಾಗಲೇ ಸಾಬೀತುಮಾಡಿವೆ. ಇದೀಗ ಸಿನಿಮಾದ ಟ್ರೈಲರ್ (Trailer) ಬಿಡುಗಡೆಗೆ ರೆಡಿಯಾಗಿದ್ದು ಸಿಬಿಎಫ್​ಸಿಯಿಂದ ಪ್ರಮಾಣ ಪತ್ರವನ್ನು ಸಹ ಪಡೆದುಕೊಂಡಿದೆ. ಚಿತ್ರಮಂದಿರಗಳಲ್ಲಿ ಟ್ರೈಲರ್ ಪ್ರದರ್ಶಿಸಬೇಕೆಂದರೆ ಹೀಗೆ ಪ್ರಮಾಣ ಪತ್ರ ಪಡೆಯುವುದು ಖಡ್ಡಾಯವಾಗಿದೆ.

ಸಿಬಿಎಫ್​ಸಿಯ ವೆಬ್​ಸೈಟ್ ಪ್ರಕಾರ, ಶಾರುಖ್ ಖಾನ್​ರ ಜವಾನ್ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಮತ್ತು ಟ್ರೈಲರ್ ಬರೋಬ್ಬರಿ 2 ನಿಮಿಷ 15 ಸೆಕೆಂಡ್​ಗಳಷ್ಟಿದೆ. ಟ್ರೈಲರ್ ಎಂದು ಬಿಡುಗಡೆ ಆಗಲಿದೆ ಎಂಬುದು ಚಿತ್ರತಂಡ ಹೇಳಿಲ್ಲವಾದರೂ ಜುಲೈ 12 ರಂದು ಬಿಡುಗಡೆ ಆಗಲಿರುವ ಟಾಮ್ ಕ್ರೂಸ್ ನಟನೆಯ ಮಿಷನ್ ಇಂಪಾಸಿಬಲ್ 7 ಸಿನಿಮಾದ ಜೊತೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶಿತಗೊಳ್ಳಲಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದೆಲ್ಲೆಡೆ ಮಿಷನ್ ಇಂಪಾಸಿಬಲ್ 7 ಜೊತೆಗೆ ಜವಾನ್ ಟ್ರೈಲರ್ ಪ್ರದರ್ಶಿಸಲಾಗುತ್ತದೆ.

ಜವಾನ್ ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಜೊತೆಗೆ ಇದು ಅವರ ಮೊದಲ ಸಿನಿಮಾ, ಮೊದಲ ಹಿಂದಿ ಸಿನಿಮಾ ಸಹ. ಆದರೆ ಈ ಸಿನಿಮಾದಲ್ಲಿ ಹಲವು ಪ್ರಮುಖ ಪಾತ್ರಗಳಲ್ಲಿ ತಮಿಳಿನ ನಟ-ನಟಿಯರೇ ಇದ್ದಾರೆ. ನಯನತಾರಾ ನಾಯಕಿ, ಯೋಗಿಬಾಬು ಇನ್ನೂ ಕೆಲವು ದಕ್ಷಿಣ ಭಾರತದ ಪರಿಚಿತ ಮುಖಗಳು ಸಿನಿಮಾದಲ್ಲಿವೆ. ಸಿನಿಮಾವು ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಸಿನಿಮಾವು ಹಿಂದಿ ಮಾತ್ರವೇ ಅಲ್ಲದೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ.

ಇದನ್ನೂ ಓದಿ:Shah Rukh Khan: ತಮ್ಮದೇ ನಿರ್ಮಾಣ ಸಂಸ್ಥೆಗೆ ದೊಡ್ಡ ಲಾಭ ಮಾಡಿಕೊಟ್ಟ ಶಾರುಖ್ ಖಾನ್; ‘ಡಂಕಿ’, ‘ಜವಾನ್​’ನಿಂದ ಬಂದ ಹಣ ಎಷ್ಟು?

ಶಾರುಖ್ ಖಾನ್​ರ ಪಠಾಣ್ ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಿತ್ತು, ಜವಾನ್ ಸಿನಿಮಾ ಆ ಕಲೆಕ್ಷನ್ ಅನ್ನು ಮೀರಿಸುವ ಲೆಕ್ಕಾಚಾರ ಇದೆ. ಪಠಾಣ್ ಸಿನಿಮಾವನ್ನು ಯಶ್​ರಾಜ್ ಫಿಲಮ್ಸ್ ನಿರ್ಮಿಸಿದ್ದರೆ ಜವಾನ್ ಸಿನಿಮಾವನ್ನು ಶಾರುಖ್ ಖಾನ್​ರ ಪತ್ನಿ ಗೌರಿ ಖಾನ್ ನಿರ್ಮಿಸಿದ್ದಾರೆ. ಈ ಸಿನಿಮಾದ ಒಟಿಟಿ ಹಾಗೂ ಆಡಿಯೋ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿವೆ ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿದೆ.

ಜವಾನ್ ಸಿನಿಮಾದ ಬಳಿಕ ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾ ಬಿಡುಗಡೆ ಆಗಲಿದೆ. ಪಠಾಣ್ ಹಾಗೂ ಜವಾನ್ ಸಿನಿಮಾಗಿಂತಲೂ ಬಹಳ ಭಿನ್ನವಾದ ಕತೆ ಹಾಗೂ ಸ್ವರೂಪದ ಸಿನಿಮಾ ಇದಾಗಿರಲಿದೆ. ಡಂಕಿ ಸಿನಿಮಾದಲ್ಲಿ ಅಕ್ರಮ ವಲಸಿಗರ ಕತೆ ಹೇಳಲಾಗುತ್ತಿದೆ. ಈ ಸಿನಿಮಾವನ್ನು ಸೋಲಿಲ್ಲದ ಸರದಾರ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ. ಮುನ್ನಾಭಾಯಿ ಎಂಬಿಬಿಎಸ್, ಲಗೆ ರಹೊ ಮುನ್ನಾಭಾಯಿ, 3 ಇಡಿಯಟ್ಸ್, ಪಿಕೆ, ಸಂಜು ಅಂಥಹಾ ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ರಾಜ್​ಕುಮಾರ್ ಹಿರಾನಿ ಈ ಹಿಂದೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಶಾರುಖ್ ಖಾನ್ ಜೊತೆ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us