ನಟ ಸೋನು ಸೂದ್ (Sonu Sood) ಅವರನ್ನು ಜನರು ದೇವರ ರೀತಿಯಲ್ಲಿ ಕಾಣುತ್ತಾರೆ. ಅದಕ್ಕೆ ಕಾರಣ ಆಗಿರುವುದು ಅವರ ರಿಯಲ್ ಲೈಫ್ ವ್ಯಕ್ತಿತ್ವ. ಲೆಕ್ಕವಿಲ್ಲದಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಮೊದಲ ಬಾರಿಗೆ ಲಾಕ್ಡೌನ್ ಆದಾಗ ಸೋನು ಸೂದ್ ಅವರು ಜನಪರ ಕಾರ್ಯಗಳನ್ನು ಮಾಡಲು ಆರಂಭಿಸಿದರು. ಸೂದ್ ಚಾರಿಟಿ ಫೌಂಡೇಷನ್ (Sood Charity Foundation) ಮೂಲಕ ಇಂದಿಗೂ ಅವರು ಈ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದಾರೆ. ಅವರಿಂದ ಸಹಾಯ ಕೋರಿ ಪ್ರತಿ ದಿನ ನೂರಾರು ಮಂದಿ ಮನವಿ ಸಲ್ಲಿಸುತ್ತಾರೆ. ಆ ಪೈಕಿ ಯೋಗ್ಯವಾದವರಿಗೆ ಸೋನು ಸೂದ್ ಸಹಾಯ ಮಾಡುತ್ತಾರೆ. ಈಗ ಅವರು ಬಾಲಕಿಯೊಬ್ಬಳಿಗೆ ಶಸ್ತ್ರ ಚಿಕಿತ್ಸೆ (Surgery) ಮಾಡಿಸಿ ಗಮನ ಸೆಳೆದಿದ್ದಾರೆ. 4 ಕೈ ಮತ್ತು 4 ಕಾಲುಗಳನ್ನು ಹೊಂದಿದ್ದ ಚಾಹುಮುಖಿ ಎಂಬ ಬಾಲಕಿಗೆ ಹೊಸ ಜೀವನ ಸಿಕ್ಕಂತೆ ಆಗಿದೆ. ಈ ಕುರಿತು ಸೋನು ಸೂದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಚಾಹುಮುಖಿ ಬಡ ಕುಟುಂಬದಲ್ಲಿ ಜನಿಸಿದ ಮಗು. ಆಕೆ ಹುಟ್ಟುವಾಗ 4 ಕೈ, 4 ಕಾಲು ಇದ್ದಿದ್ದು ಕಂಡು ಪೋಷಕರು ಕಂಗಾಲಾಗಿದ್ದರು. ಶಸ್ತ್ರ ಚಿಕಿತ್ಸೆ ಮಾಡಿಸಲು ಅವರ ಬಳಿ ಹಣ ಇರಲಿಲ್ಲ. ಆಕೆಯ ಬಗ್ಗೆ ತಿಳಿದ ಸೋನು ಸೂದ್ ಅವರು ನೆರವಿಗೆ ಧಾವಿಸಿದ್ದಾರೆ. ಆಪರೇಷನ್ಗೆ ಬೇಕಾದ ಹಣವನ್ನು ನೀಡಿದ್ದಲ್ಲದೇ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಂದ್ದಾರೆ. ‘ಬಿಹಾರದ ಈ ಬಾಲಕಿಯ ಆಪರೇಷನ್ ಯಶಸ್ವಿ ಆಗಿದೆ. ಮನೆಗೆ ತೆರಳಲು ಆಕೆ ಸಿದ್ಧಳಾಗಿದ್ದಾಳೆ’ ಎಂದು ಸೋನು ಸೂದ್ ಪೋಸ್ಟ್ ಮಾಡಿದ್ದಾರೆ.
ಸೋನು ಸೂದ್ ಅವರ ಈ ಕಾರ್ಯವನ್ನು ಕಂಡು ಜನರು ಮೆಚ್ಚುಗೆ ಸೂಚಿಸಿದ್ದಾರೆ. ‘ನೀವೇ ನಿಜವಾದ ಹೀರೋ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಸೋನು ಸೂದ್ಗೆ ಭೇಷ್ ಎಂದಿದ್ದಾರೆ. ಸುನೀಲ್ ಶೆಟ್ಟಿ, ಇಶಾ ಗುಪ್ತಾ ಸೇರಿದಂತೆ ಅನೇಕರು ಸೋನು ಸೂದ್ ಅವರನ್ನು ಪ್ರಶಂಸಿಸಿದ್ದಾರೆ. ಸದ್ಯ ಈ ಫೋಸ್ಟ್ ವೈರಲ್ ಆಗಿದೆ.
ಸೋನು ಸೂದ್ ಅವರು ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಹಲವು ಆಫರ್ಗಳು ಅವರಿಗೆ ಬರುತ್ತಿವೆ. ಕೋಟಿಗಟ್ಟಲೆ ಸಂಭಾವನೆ ಪಡೆಯುವ ಅವರು ಅದನ್ನು ಜನಸೇವೆಗೆ ಬಳಸುತ್ತಾರೆ. ಮೊದಲು ವಿಲನ್ ಆಗಿ ನಟಿಸುತ್ತಿದ್ದ ಅವರಿಗೆ ಈಗ ಆ ರೀತಿಯ ಪಾತ್ರಗಳನ್ನು ನೀಡಲು ಸಾಧ್ಯವಿಲ್ಲ. ಸಿನಿಮಾದಲ್ಲಿಯೂ ಅವರನ್ನು ಹೀರೋ ಆಗಿಯೇ ನೋಡಲು ಜನರು ಬಯಸುತ್ತಿದ್ದಾರೆ. ಅಷ್ಟರಮಟ್ಟಿಗೆ ಸೋನು ಸೂದ್ ಇಮೇಜ್ ಬದಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:08 pm, Fri, 10 June 22