
ಇಷ್ಟು ದಿನಗಳ ಕಾಲ ‘ಗದರ್ 2’ ಸಿನಿಮಾ (Gadar 2 Movie) ಉತ್ತಮವಾಗಿ ಪ್ರದರ್ಶನ ಕಾಣುತ್ತಿತ್ತು. ಬಿಡುಗಡೆ ಆದಾಗಿನಿಂದ 15 ದಿನಗಳ ಕಾಲ ಅತ್ಯುತ್ತಮವಾಗಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಆದರೆ ಈಗ ಈ ಚಿತ್ರಕ್ಕೆ ಪೈಪೋಟಿ ಹೆಚ್ಚಾಗಿದೆ. ಇಂದು (ಆಗಸ್ಟ್ 25) ಹೊಸ ಸಿನಿಮಾಗಳು ಬಿಡುಗಡೆ ಆಗಿವೆ. ಆ ಚಿತ್ರಗಳು ಕೂಡ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿವೆ. 14ನೇ ದಿನಕ್ಕೆ ‘ಗದರ್ 2’ ಸಿನಿಮಾದ ಕಲೆಕ್ಷನ್ ಒಂದಂಕಿಗೆ ಕುಸಿದಿದೆ. ಇನ್ಮುಂದೆ ಈ ಚಿತ್ರದ ಕಲೆಕ್ಷನ್ (Gadar 2 Collection) ಗಣನೀಯವಾಗಿ ಕುಸಿಯಲಿದೆಯಾ ಅಥವಾ ವೀಕೆಂಡ್ನಲ್ಲಿ ಮತ್ತೆ ಕಮಾಯಿ ಹೆಚ್ಚಾಗಲಿದೆಯಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ನಟ ಸನ್ನಿ ಡಿಯೋಲ್ (Sunny Deol) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್ ನಟಿಸಿದ್ದಾರೆ.
ಬಿಡುಗಡೆಯಾಗಿ 15 ದಿನ ಕಳೆಯುವ ತನಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ‘ಗದರ್ 2’ ಸಿನಿಮಾ ಅಂತಹ ಸಾಧನೆ ಮಾಡಿದೆ. 14ನೇ ದಿನ ಕೂಡ ಈ ಸಿನಿಮಾ 8.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಲ್ಲಿಗೆ, ಈ ಚಿತ್ರದ ಟೋಟಲ್ ಕಲೆಕ್ಷನ್ 419 ಕೋಟಿ ರೂಪಾಯಿ ಆಗಿದೆ. ಈ ವೀಕೆಂಡ್ನಲ್ಲಿ ಕಲೆಕ್ಷನ್ ಹೆಚ್ಚಿದರೆ ಚಿತ್ರದ ಬಿಸ್ನೆಸ್ಗೆ ಮತ್ತೆ ಚೈತನ್ಯ ಬಂದಂತೆ ಆಗಲಿದೆ. ಇನ್ನೂ ಹಲವು ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.
‘ಗದರ್ 2’ ಸಿನಿಮಾದ ಗೆಲುವಿನ ಖುಷಿಯಲ್ಲಿ ನಟಿ ಅಮೀಷಾ ಪಟೇಲ್
ಈ ಶುಕ್ರವಾರ ಬಾಲಿವುಡ್ನಲ್ಲಿ ‘ಡ್ರೀಮ್ ಗರ್ಲ್ 2’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಅವರು ನಟಿಸಿದ್ದಾರೆ. ವಿಮರ್ಶಕರು ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನುಸ್ರತ್ ಬರೂಚಾ ಅಭಿನಯದ ‘ಅಕೇಲಿ’ ಸಿನಿಮಾ ಕೂಡ ಗಮನ ಸೆಳೆಯುತ್ತಿದೆ. ಈ ಸಿನಿಮಾಗಳಿಗೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕರೆ ‘ಗದರ್ 2’ ಚಿತ್ರಕ್ಕೆ ಪೈಪೋಟಿ ಹೆಚ್ಚಾಗಲಿದೆ. ಆಗ ಸಹಜವಾಗಿಯೇ ‘ಗದರ್ 2’ ಕಲೆಕ್ಷನ್ ಕುಸಿಯಲಿದೆ. ಹಾಗಿದ್ದರೂ ಕೂಡ 500 ಕೋಟಿ ರೂಪಾಯಿ ಗಡಿ ಮುಟ್ಟುವ ಸಾಮರ್ಥ್ಯ ಈ ಸಿನಿಮಾಗೆ ಇದೆ ಎಂದು ಕೆಲವರು ಅಂದಾಜಿಸಿದ್ದಾರೆ.
ಹಲವು ವರ್ಷಗಳಿಂದ ಸನ್ನಿ ಡಿಯೋಲ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿರಲಿಲ್ಲ. ಆದರೆ ‘ಗದರ್ 2’ ಸಿನಿಮಾದಿಂದ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಗಿದೆ ಎಂದೇ ಹೇಳಬಹುದು. ಈ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವುದರಿಂದ ಸನ್ನಿ ಡಿಯೋಲ್ಗೆ ಇದ್ದ ಬೇಡಿಕೆ ದುಪ್ಪಟ್ಟಾಗಿದೆ. ಅವರು ನಟಿಸಲಿರುವ ಹೊಸ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದಂತಾಗಿದೆ. ‘ಗದರ್ 3’ ಬರುತ್ತಾ? ‘ಬಾರ್ಡರ್ 2’ ಸಿನಿಮಾ ಮಾಡ್ತಾರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಇಟ್ಟುಕೊಂಡು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.