ನಟಿ ರಿಯಾ ಚಕ್ರವರ್ತಿ (Rhea Chakraborty) ಅವರ ಹೆಸರು ಸಿಕ್ಕಾಪಟ್ಟೆ ಪ್ರಚಾರಕ್ಕೆ ಬಂದಿದ್ದೇ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ. 2020ರ ಜೂನ್ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ದೇಹ ಪತ್ತೆ ಆಗಿತ್ತು. ಆ ಘಟನೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ ರಿಯಾ ಚಕ್ರವರ್ತಿ ಜೊತೆ ಅವರು ಬ್ರೇಕಪ್ ಮಾಡಿಕೊಂಡಿದ್ದರು. ಬಹುಕಾಲದಿಂದ ಪ್ರೀತಿಸುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮತ್ತು ರಿಯಾ ಚಕ್ರವರ್ತಿ ಏಕಾಏಕಿ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಸುಶಾಂತ್ ಸಾವಿಗೂ (Sushant Singh Rajput Death) ಬ್ರೇಕಪ್ಗೂ ಏನಾದರೂ ಲಿಂಕ್ ಇದೆಯೇ ಎಂದು ತಿಳಿಯಲು ತನಿಖೆ ಕೂಡ ನಡೆದಿದೆ. ಅದರ ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ. ಆದರೆ ರಿಯಾ ಚಕ್ರವರ್ತಿ ಜೊತೆ ಸುಶಾಂತ್ ಅವರು ಖುಷಿಯಾಗಿ ಇದ್ದರು ಎಂಬುದಕ್ಕೆ ಹಲವು ಫೋಟೋ ಮತ್ತು ವಿಡಿಯೋಗಳು ಸಾಕ್ಷಿ ಆಗಿವೆ. ಆ ಪೈಕಿ ಒಂದು ಅಪರೂಪದ ವಿಡಿಯೋವನ್ನು ರಿಯಾ ಚಕ್ರವರ್ತಿ ಈಗ ಶೇರ್ ಮಾಡಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ನಿಧನರಾಗಿ ಇಂದಿಗೆ (ಜೂನ್ 14) ಮೂರು ವರ್ಷ ಕಳೆದಿದೆ. ಕುಟುಂಬದವರು, ಅಭಿಮಾನಿಗಳು ಹಾಗೂ ಆಪ್ತರು ಅವರನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್ನಲ್ಲಿ ಮಿಂಚಿ ಮೆರೆಯಬೇಕಿದ್ದ ಸುಶಾಂತ್ ಅವರು ಸಾವಿನ ಮನೆಗೆ ತೆರಳಿದ್ದು ಯಾಕೆ ಎಂಬುದು ಸದ್ಯಕ್ಕಂತೂ ನಿಗೂಢ. ಈಗ ಅವರನ್ನು ನೆನಪಿಸಿಕೊಳ್ಳುವ ಸಲುವಾಗಿ ರಿಯಾ ಚಕ್ರವರ್ತಿ ಅವರು ಇನ್ಸ್ಟಾಗ್ರಾಮ್ನಲ್ಲಿ ಅಪರೂಪದ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರಿಬ್ಬರು ತುಂಬ ಖುಷಿಯಿಂದ ಕಾಲ ಕಳೆಯುತ್ತಿದ್ದ ಕ್ಷಣಗಳು ಸೆರೆಯಾಗಿವೆ. ಇದನ್ನು ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ರಿಯಾ ಚಕ್ರವರ್ತಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಒಂದು ಕಡೆ ಪ್ರಿಯಕರನ ನಿಧನದ ನೋವು, ಇನ್ನೊಂದು ಕಡೆ ತನಿಖೆಯ ತಲೆಬಿಸಿ. ಮತ್ತೊಂದು ಕಡೆ ಸಮಾಜದ ನಿಂದನೆ. ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ದೂರು ಕೂಡ ದಾಖಲಾಯಿತು. ಸುಶಾಂತ್ಗೆ ರಿಯಾ ಅವರೇ ಡ್ರಗ್ಸ್ ನೀಡುತ್ತಿದ್ದರು ಎಂದು ಕೂಡ ಹೇಳಲಾಯಿತು. ಇಂಥ ಹಲವು ಆರೋಪಗಳನ್ನು ಎದುರಿಸಿದ ಅವರು ಜೈಲಿಗೂ ಹೋಗಿಬಂದರು. ಇಷ್ಟೆಲ್ಲ ಆದರೂ ಸಹ ಸುಶಾಂತ್ ಬಗ್ಗೆ ರಿಯಾ ಚಕ್ರವರ್ತಿಗೆ ಇದ್ದ ಭಾವನೆ ಬದಲಾಗಿಲ್ಲ. ಹಾಗಾಗಿ ಅವರು ಮಾಜಿ ಪ್ರಿಯಕರನ ನೆನಪಿಗಾಗಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನು, ಸುಶಾಂತ್ ಸಿಂಗ್ ರಜಪೂತ್ ಅವರ ಫ್ಯಾಮಿಲಿಯವರು ಕೂಡ ನಟನ ಪುಣ್ಯ ಸ್ಮರಣೆ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ನಮನ ಸಲ್ಲಿಸಿದ್ದಾರೆ. ಹಳೇ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ‘ಪ್ಲೀಸ್ ಸುಶಾಂತ್.. ವಾಪಸ್ ಬನ್ನಿ’ ಎಂದು ಅಭಿಮಾನಿಗಳು ಎಮೋಷನಲ್ ಆಗಿ ಕಮೆಂಟ್ ಮಾಡಿದ್ದಾರೆ. ಸುಶಾಂತ್ ನಟಿಸಿದ್ದ ಸಿನಿಮಾಗಳನ್ನು ಮತ್ತೆ ವೀಕ್ಷಿಸುವ ಮೂಲಕವೂ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅವರ ಹಳೆಯ ಸಂದರ್ಶನದ ತುಣುಕುಗಳು, ವಿಡಿಯೋಗಳು ವೈರಲ್ ಆಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.