
ನಟಿ ಸುಶ್ಮಿತಾ ಸೇನ್ (Sushmita Sen) ಅವರು ಬಾಲಿವುಡ್ನಲ್ಲಿ ಸಖತ್ ಜನಪ್ರಿಯತೆ ಹೊಂದಿದ್ದಾರೆ. ಫ್ಯಾಷನ್ ಜಗತ್ತಿನಲ್ಲಿ ಮಿಂಚಿದ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಎರಡೂ ಕ್ಷೇತ್ರದಲ್ಲಿ ಅವರಿಗೆ ಯಶಸ್ಸು ಸಿಕ್ಕಿತು. ನಟಿಯಾಗಿ, ಮಾಡೆಲ್ ಆಗಿ ಅವರು ಗೆಲುವು ಸಾಧಿಸಿದರು. ವೈಯಕ್ತಿಕ ಜೀವನದಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಅನೇಕರಿಗೆ ಅಚ್ಚರಿ ಉಂಟು ಮಾಡಿವೆ. ವಯಸ್ಸಿನಲ್ಲಿ ತಮಗಿಂತ 15 ವರ್ಷ ಚಿಕ್ಕ ಯುವಕನ ಜೊತೆ ಅವರು ಡೇಟಿಂಗ್ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು. ಈಗ ಅವರು ತಮಗಿಂತ 10 ವರ್ಷ ಹಿರಿಯರಾದ ಲಲಿತ್ ಮೋದಿ (Lalit Modi) ಜೊತೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಈವರೆಗೂ ಮದುವೆ ಆಗದ ಸುಶ್ಮಿತಾ ಸೇನ್ ಅವರಿಗೆ ಇಬ್ಬರು ಮಕ್ಕಳು (Sushmita Sen Children) ಇದ್ದಾರೆ.
18ನೇ ವಯಸ್ಸಿನಲ್ಲೇ ಸುಶ್ಮಿತಾ ಸೇನ್ ಅವರು ಮಿಸ್ ಯೂನಿವರ್ಸ್ ಮತ್ತು ಮಿಸ್ ಇಂಡಿಯಾ ಕಿರೀಟ ಪಡೆದು ಬೀಗಿದರು. ಬಳಿಕ ಅವರಿಗೆ ಚಿತ್ರರಂಗದಿಂದ ಹೇರಳ ಅವಕಾಶ ಬಂತು. ತಮ್ಮ 24ನೇ ವಯಸ್ಸಿನಲ್ಲಿ ಅವರು ಹೆಣ್ಣು ಮಗುವನ್ನು ದತ್ತು ಪಡೆಯುವ ತೀರ್ಮಾನಕ್ಕೆ ಬಂದರು. ಆಗ ಅವರ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಆಗದೇ ಮಗುವನ್ನು ಸಾಕುವುದು ಕಷ್ಟ ಎಂದು ಕೆಲವರು ಕಿವಿಮಾತು ಹೇಳಿದ್ದರು. ಆದರೆ ಅವುಗಳಿಗೆ ಸುಶ್ಮಿತಾ ಸೇನ್ ತಲೆ ಕೆಡಿಸಿಕೊಳ್ಳಲಿಲ್ಲ. 2000ನೇ ಇಸವಿಯಲ್ಲಿ ರೀನೀ ಎಂಬ ಹೆಣ್ಣು ಮಗಳನ್ನು ಅವರು ದತ್ತು ಪಡೆದುಕೊಂಡರು. 2010ರಲ್ಲಿ ಆಲಿಶಾ ಎಂಬ ಮಗುವನ್ನು ಅವರು ದತ್ತು ಪಡೆದರು.
ಸುಶ್ಮಿತಾ ಸೇನ್ ಅವರು ಈವರೆಗೂ ಮದುವೆ ಆಗಿಲ್ಲ. 2018ರಿಂದ 2022ರವರೆಗೆ ರೋಹ್ಮನ್ ಶಾಲ್ ಜೊತೆ ಅವರು ಲಿವ್-ಇನ್-ರಿಲೇಶನ್ಶಿಪ್ನಲ್ಲಿ ಇದ್ದರು. ರೋಹ್ಮಲ್ ಶಾಲ್ಗೆ ಈಗಿನ್ನೂ 31 ವರ್ಷ ವಯಸ್ಸು. ಇತ್ತೀಚೆಗೆ ಅವರಿಬ್ಬರ ನಡುವೆ ಬ್ರೇಕಪ್ ಆಯಿತು. ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಜೊತೆ ಈಗ ಸುಷ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಶೀಘ್ರದಲ್ಲೇ ಅವರು ಮದುವೆ ಆಗುತ್ತಾರೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ. ಲಲಿತ್ ಮೋದಿ ಅವರಿಗೆ ಈಗ 56 ವರ್ಷ ವಯಸ್ಸು.
ಸುಶ್ಮಿತಾ ಸೇನ್ ನಟಿಸಿದ ಮೊದಲ ಸಿನಿಮಾ ‘ದಸ್ತಕ್’. ನಾಯಕಿಯಾಗಿ ನಟಿಸುವುದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿಯೂ ಅವರು ಜನಮನ ಗೆದ್ದರು. ‘ಬೀವಿ ನಂ.1’, ‘ಮೈ ಹೂ ನಾ’, ‘ಮೈ ನೇ ಪ್ಯಾರ್ ಕ್ಯೂ ಕಿಯಾ’ ಮುಂತಾದವು ಸುಶ್ಮಿತಾ ಸೇನ್ ಅವರು ಪ್ರಮುಖ ಸಿನಿಮಾಗಳು. ಇತ್ತೀಚೆಗೆ ಅವರು ‘ಆರ್ಯ’ ವೆಬ್ ಸೀರಿಸ್ನಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
Published On - 7:45 am, Fri, 15 July 22