ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: 50,000 ರೂ. ಅಡ್ವಾನ್ಸ್ ಪಡೆದು 10 ದಿನ ಕಣ್ಣಿಟ್ಟಿದ್ದ ಶಂಕಿತರು

ಖ್ಯಾತ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದ ಮೂವರು ಶಂಕಿತರನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿದೆ. 50 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದು, 10 ದಿನಗಳ ಕಾಲ ನಟನ ಮನೆ ಹಾಗೂ ಜಿಮ್ ಮೇಲೆ ನಿಗಾ ವಹಿಸಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: 50,000 ರೂ. ಅಡ್ವಾನ್ಸ್ ಪಡೆದು 10 ದಿನ ಕಣ್ಣಿಟ್ಟಿದ್ದ ಶಂಕಿತರು
Tiger Shroff

Updated on: Oct 19, 2026 | 9:18 PM

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಕೃತ್ಯವೆಸಗಿದ್ದ ಮೂವರು ಶಂಕಿತ ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ದಾಳಿ ನಡೆಸಲು ಈ ಆರೋಪಿಗಳಿಗೆ ಒಟ್ಟಾರೆಯಾಗಿ 50 ಸಾವಿರ ರೂಪಾಯಿ ಮುಂಗಡ ಹಣ ನೀಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೋಮವಾರ (ಅಕ್ಟೋಬರ್ 19) ಮುಂಜಾನೆ ಮುಂಬೈ ಪೊಲೀಸರು, ರಾಜಸ್ಥಾನ ಪೊಲೀಸರು ಮತ್ತು ರೈಲ್ವೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಕೋಟಾ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳನ್ನು ಹರಿಯಾಣದ ಸೋನಿಪತ್ ನಿವಾಸಿ ರೇಹಾನ್ (18) ಹಾಗೂ ಬಿಹಾರದ ಬೆಗುಸರಾಯ್ ಮೂಲದ ರಿತಿಕ್ (22) ಎಂದು ಗುರುತಿಸಲಾಗಿದೆ. ಮೂರನೇ ಆರೋಪಿ ಹರಿಯಾಣದ ಅಪ್ರಾಪ್ತ ಬಾಲಕನಾಗಿದ್ದಾನೆ. ಆತನ ನಿರ್ದಿಷ್ಟ ಪಾತ್ರವೇನು ಮತ್ತು ನೇರವಾಗಿ ಗುಂಡು ಹಾರಿಸಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Loading...

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ದಾಳಿ ನಡೆಸುವ ಮೊದಲು ನಟ ಟೈಗರ್ ಶ್ರಾಫ್ ಅವರ ಮನೆ ಹಾಗೂ ಜಿಮ್ ಸುತ್ತಮುತ್ತ ಸುಮಾರು 10 ದಿನಗಳ ಕಾಲ ಸುತ್ತಾಡಿದ್ದರು. ನಟನ ದಿನಚರಿ ಹಾಗೂ ಓಡಾಟದ ಬಗ್ಗೆ ಮಾಹಿತಿ ಕಲೆಹಾಕಲು ಪಪಾರಾಜಿಗಳು ಹಂಚಿಕೊಳ್ಳುತ್ತಿದ್ದ ವಿಡಿಯೋಗಳು ಮತ್ತು ಸಾಮಾಜಿಕ ಜಾಲತಾಣಗಳ ಬ್ಲಾಗ್‌ಗಳನ್ನು ಬಳಸಿಕೊಂಡಿದ್ದರು.

ಆರೋಪಿಗಳು ವಾಟ್ಸಾಪ್ ಮತ್ತು ಸಿಗ್ನಲ್ ಆ್ಯಪ್‌ಗಳ ಮೂಲಕ ತಮ್ಮ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅಪರಾಧ ನಡೆದ ಸ್ಥಳದ ಲೊಕೇಷನ್ ಅನ್ನು ಕೂಡ ಇವರಿಗೆ ಈ ಆ್ಯಪ್‌ಗಳ ಮೂಲಕವೇ ಕಳುಹಿಸಲಾಗಿತ್ತು. ಭಾನುವಾರ (ಅಕ್ಟೋಬರ್ 18) ಸಂಜೆ 7 ಗಂಟೆ ಸುಮಾರಿಗೆ ಜುಹುವಿನ ಪುಷ್ಪಾ ಪಾರ್ಕ್‌ನಿಂದ ಕಾರಿನಲ್ಲಿ ತೆರಳುತ್ತಿದ್ದಾಗ ಟೈಗರ್ ಶ್ರಾಫ್ ಮೇಲೆ ದುಷ್ಕರ್ಮಿಗಳು 5 ಸುತ್ತು ಗುಂಡು ಹಾರಿಸಿದ್ದರು. ಅದೃಷ್ಟವಶಾತ್ ಟೈಗರ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ ಹಾಗೂ ಮತ್ತೊಬ್ಬರಿಗೆ ಗಾಯಗಳಾಗಿತ್ತು.

ಇದನ್ನೂ ಓದಿ: ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಆರೋಪಿ ಅನಿಲ್ ಪಂಡಿತ್ ಮೇಲಿವೆ 12ಕ್ಕೂ ಹೆಚ್ಚು ಕೇಸ್

ಗುಂಡಿನ ದಾಳಿಯ ಬಳಿಕ ಆರೋಪಿಗಳು ಎಸ್‌ವಿ ರಸ್ತೆ ಮೂಲಕ ವಿಲೆ ಪಾರ್ಲೆ ಮತ್ತು ಅಂಧೇರಿ ಮಾರ್ಗವಾಗಿ ಪೂರ್ವಯೋಜಿತ ಪ್ಲ್ಯಾನ್‌ನಂತೆ ಪರಾರಿಯಾಗಿದ್ದರು. ಅಂಧೇರಿ ವೆಸ್ಟ್ ರೈಲು ನಿಲ್ದಾಣದ ಬಳಿ ತಮ್ಮ ಬೈಕ್ ಬಿಟ್ಟು ಬೋರಿವಾಲಿ ಕಡೆಗೆ ತೆರಳುವ ರೈಲು ಹತ್ತಿದ್ದರು. ಈ ಕುರಿತು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆಪ್ತರು ಎನ್ನಲಾದ ಅನಿಲ್ ಪಂಡಿತ್ ಹಾಗೂ ಹರ್ಮನ್ ಸಂಧು ಸಾಮಾಜಿಕ ಜಾಲತಾಣಗಳಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us