
ಖಾನ್ ತ್ರಯರು ಒಬ್ಬರ ಸಿನಿಮಾನಲ್ಲಿ ಮತ್ತೊಬ್ಬರು ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಸಾಮಾನ್ಯ. ಆಮಿರ್ ಖಾನ್ ಇತರರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಸಲ್ಮಾನ್ ಮತ್ತು ಶಾರುಖ್ ಖಾನ್, ಪರಸ್ಪರರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. ದಶಕಗಳಿಂದಲೂ ಇಬ್ಬರ ನಡುವೆ ಬಾಂಧವ್ಯ ಚೆನ್ನಾಗಿದ್ದು, ದಶಕಗಳಿಂದಲೂ ಪರಸ್ಪರರ ಸಿನಿಮಾಗಳಲ್ಲಿ ಕ್ಯಾಮಿಯೋ ಮಾಡುತ್ತಲೇ ಬರುತ್ತಿದ್ದಾರೆ.
ಆದರೆ ಇದೀಗ ಸಲ್ಮಾನ್ ಮತ್ತು ಶಾರುಖ್ ಖಾನ್ ಸಿನಿಮಾನಲ್ಲಿ ಪರಸ್ಪರ ಮುಖಾ-ಮುಖಿ ಆಗಲಿದ್ದಾರೆ. ಸಲ್ಮಾನ್ ಖಾನ್ ಟೈಗರ್ ಸಿನಿಮಾ ಮೂಲಕ ಸ್ಪೈ ಆಕ್ಷನ್ ಸಿನಿಮಾಗಳನ್ನು ಹಲವಾರು ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಶಾರುಖ್ ಖಾನ್ ಸಹ ‘ಪಠಾಣ್’ ಹೆಸರಿನಲ್ಲಿ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಿದ್ದಾರೆ. ಎರಡೂ ಸಿನಿಮಾಗಳನ್ನು ನಿರ್ಮಾಣ ಮಾಡಿರುವುದು ಯಶ್ ರಾಜ್ ಫಿಲಮ್ಸ್.
ಇದೀಗ ಯಶ್ ರಾಜ್ ಫಿಲಮ್ಸ್ ಭಾರಿ ಯೋಜನೆಯೊಂದನ್ನು ಹಾಕಿಕೊಂಡಿದ್ದು, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರನ್ನು ಮುಖಾ-ಮುಖಿಗೊಳಿಸಲು ಅಣಿಯಾಗುತ್ತಿದೆ. ‘ಪಠಾಣ್ vs ಟೈಗರ್’ ಹೆಸರಿನ ಸಿನಿಮಾ ಮಾಡಲು ಯಶ್ ರಾಜ್ ಫಿಲಮ್ಸ್ ಮುಂದಾಗಿದೆ. ಈ ಹಿಂದಿನ ಸಿನಿಮಾಗಳಲ್ಲಿ ಟೈಗರ್ ಮತ್ತು ಪಠಾಣ್ ಪರಸ್ಪರ ಗೆಳೆಯರಂತೆ ತೋರಿಸಲಾಗಿದೆ. ‘ಪಠಾಣ್’ ಸಿನಿಮಾನಲ್ಲಿ ಶಾರುಖ್ ಖಾನ್ ಕಷ್ಟದಲ್ಲಿದ್ದಾಗ ಟೈಗರ್ ಸಹಾಯಕ್ಕೆ ಬಂದ ರೀತಿಯಲ್ಲಿ ತೋರಿಸಲಾಗಿತ್ತು. ಆದರೆ ಈಗ ಎರಡು ಪಾತ್ರಗಳನ್ನು ವಿರೋಧಿಗಳಾಗಿ ತೋರಿಸಲು ಯೋಜನೆ ಸಿದ್ಧವಾಗುತ್ತಿದೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್ಗೆ ಪಡೆಯೋ ಸಂಭಾವನೆ ಇಷ್ಟೊಂದಾ?
‘ಪಠಾಣ್ vs ಟೈಗರ್’ ಸಿನಿಮಾನಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಇರಲಿದ್ದು, ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮಾತ್ರವಲ್ಲದೆ ಈ ಸಿನಿಮಾನಲ್ಲಿ ಆಲಿಯಾ ಭಟ್, ಆಮಿರ್ ಖಾನ್ ಮತ್ತು ರಣ್ವೀರ್ ಸಿಂಗ್ ಸಹ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದ ಚಿತ್ರಕತೆ ಚಾಲ್ತಿಯಲ್ಲಿದ್ದು, ಈ ಸಿನಿಮಾ ಭಾರತದ ದೊಡ್ಡ ಬಜೆಟ್ನ ಸಿನಿಮಾ ಆಗುವ ಎಲ್ಲ ಲಕ್ಷಗಳೂ ಸಹ ಇವೆ.
ಶಾರುಖ್ ಖಾನ್ ಪ್ರಸ್ತುತ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇನ್ನು ಸಲ್ಮಾನ್ ಖಾನ್ ‘ಕಿಕ್ 2’ ಮತ್ತು ‘ಸಿಂಘಂ-ದಬಂಗ್’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ