AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ರಾಜ್ ಫಿಲ್ಮ್ಸ್‌ ಚೊಚ್ಚಲ ಹಾರರ್ ಸಿನಿಮಾದಲ್ಲಿ ವರುಣ್ ಧವನ್; ಬಿಡುಗಡೆ ದಿನಾಂಕ ಘೋಷಣೆ

ಇದೇ ಮೊದಲ ಬಾರಿಗೆ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯ ಕಡೆಯಿಂದ ಹಾರರ್ ಸಿನಿಮಾ ಘೋಷಣೆ ಮಾಡಲಾಗಿದೆ. ಈ ಸಿನಿಮಾದಲ್ಲಿ ನಟಿಸಲಿರುವ ವರುಣ್ ಧವನ್ ಅವರಿಗೂ ಇದು ಮೊದಲ ಹಾರರ್ ಚಿತ್ರ. ಆ ಕಾರಣದಿಂದ ಸಿನಿಪ್ರಿಯರಿಗೆ ನಿರೀಕ್ಷೆ ಹೆಚ್ಚಿದೆ. ಸಿನಿಮಾದ ಶೀರ್ಷಿಕೆ ಏನು ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿ ಇರಿಸಲಾಗಿದೆ.

ಯಶ್ ರಾಜ್ ಫಿಲ್ಮ್ಸ್‌ ಚೊಚ್ಚಲ ಹಾರರ್ ಸಿನಿಮಾದಲ್ಲಿ ವರುಣ್ ಧವನ್; ಬಿಡುಗಡೆ ದಿನಾಂಕ ಘೋಷಣೆ
Varun DhawanImage Credit source: Instagram/varundvn
ಮದನ್​ ಕುಮಾರ್​
|

Updated on: Nov 15, 2026 | 11:15 AM

Share

ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಯಶ್ ರಾಜ್ ಫಿಲ್ಮ್ಸ್’ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ತನ್ನ ಬ್ಯಾನರ್ ಅಡಿಯಲ್ಲಿ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾವನ್ನು ನಿರ್ಮಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್ ನಟ ವರುಣ್ ಧವನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, 2028ರ ಮಾರ್ಚ್ 31ರಂದು ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.

ಇನ್ನೂ ಹೆಸರಿಡದ ಈ ಹಾರರ್ ಚಿತ್ರಕ್ಕೆ ‘ರಾಕೆಟ್ ಬಾಯ್ಸ್’ ವೆಬ್ ಸರಣಿಯ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದ ಅಭಯ್ ಪನ್ನು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರದ ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ವಿಶೇಷವೆಂದರೆ, ಅಭಯ್ ಪನ್ನು ಅವರಿಗೆ ಇದು ದೊಡ್ಡ ಪರದೆಯ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.

ಇದುವರೆಗೂ ರೊಮ್ಯಾನ್ಸ್, ಆ್ಯಕ್ಷನ್, ಡ್ರಾಮಾ, ಕಾಮಿಡಿ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಇದೇ ಮೊದಲ ಬಾರಿಗೆ ಹಾರರ್ ಜಾನರ್‌ಗೆ ಕಾಲಿಡುತ್ತಿದೆ. ದೊಡ್ಡ ಪರದೆಯ ಅನುಭವಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಚಿತ್ರವನ್ನು ಆದಿತ್ಯ ಚೋಪ್ರಾ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಹೊಸ ಪ್ರತಿಭೆಗಳು ಮತ್ತು ವಿಭಿನ್ನ ಕಥಾಹಂದರಗಳಿಗೆ ಪ್ರೋತ್ಸಾಹ ನೀಡುವ ತನ್ನ ಸಂಪ್ರದಾಯವನ್ನು ಯಶ್ ರಾಜ್ ಸಂಸ್ಥೆ ಈ ಮೂಲಕವೂ ಮುಂದುವರಿಸಿದೆ.

ವರುಣ್ ಧವನ್ ಅವರಿಗೆ ಯಶ್ ರಾಜ್ ಫಿಲ್ಮ್ಸ್ ಜೊತೆಗಿನ ಎರಡನೇ ಸಿನಿಮಾ ಇದಾಗಿದೆ. ತಮ್ಮ ಹಿಂದಿನ ಸಿನಿಮಾಗಳಿಗಿಂತ ತೀರಾ ಭಿನ್ನವಾದ ಪಾತ್ರದಲ್ಲಿ ವರುಣ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಯ್ ಪನ್ನು ನಿರ್ದೇಶನದಲ್ಲಿ ಅವರು ಹಾರರ್ ಜಾನರ್‌ನಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ಕಂಗನಾ ರನೌತ್ ಜೊತೆ ಹಾರರ್ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ

ಸದ್ಯಕ್ಕೆ ಚಿತ್ರದ ಶೀರ್ಷಿಕೆ, ಕಥಾಹಂದರ ಮತ್ತು ಉಳಿದ ತಾರಾಗಣದ ಕುರಿತು ಚಿತ್ರತಂಡ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಬಿಡುಗಡೆ ದಿನಾಂಕವನ್ನು (2028, ಮಾರ್ಚ್ 31) ಈಗಲೇ ಘೋಷಿಸುವ ಮೂಲಕ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ತನ್ನ ಮುಂದಿನ ಯೋಜನೆಗಳ ಕುರಿತು ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More