
ನಟಿ ಊರ್ವಶಿ ರೌಟೆಲಾ (Urvashi Rautela) ತಮ್ಮ ಸಿನಿಮಾ, ಐಟಂ ಹಾಡುಗಳ ಜೊತೆಗೆ ತಮ್ಮ ಫ್ಯಾಷನ್ನಿಂದಲೂ ಗಮನ ಸೆಳೆಯುತ್ತಾರೆ. ಭಾರತದ ಬಲು ಬೇಡಿಕೆಯ ಐಟಂ ಸಾಂಗ್ ಡ್ಯಾನ್ಸರ್ ಆಗಿರುವ ಊರ್ವಶಿ ರೌಟೆಲಾ ಮಾಡೆಲಿಂಗ್ ಸಹ ಮಾಡುತ್ತಾರೆ. ಸಿನಿಮೋತ್ಸವಗಳಲ್ಲಿ ರೆಡ್ ಕಾರ್ಪೇಟ್ ಮೇಲೆ ಕ್ಯಾಟ್ ವಾಕ್ ಮಾಡುವುದೆಂದರೆ ಊರ್ವಶಿಗೆ ಎಲ್ಲಿಲ್ಲದ ಪ್ರೀತಿ. ಇದೀಗ ಕಾನ್ನಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಊರ್ವಶಿ ಭಾಗಿ ಆಗಿದ್ದು, ಅಲ್ಲಿ ರೆಡ್ ಕಾರ್ಪೇಟ್ ಮೇಲೆ ಅದ್ಭುತವಾಗಿ ಕಾಣುತ್ತಿರುವ ಉಡುಗೆ ತೊಟ್ಟು ನಡೆದಿದ್ದಾರೆ. ಸಹಜವಾಗಿಯೇ ತಮ್ಮ ಉಡುಪು, ಸೌಂದರ್ಯದಿಂದ ಊರ್ವಶಿ ಗಮನ ಸೆಳೆದಿದ್ದಾರೆ. ಆದರೆ ಆ ಕಾರ್ಯಕ್ರಮದಲ್ಲಿ ಊರ್ವಶಿಗೆ ಆಯೋಜಕರು ಅವಮಾನ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಊರ್ವಶಿ ರೌಟೆಲಾ, ಕಾನ್ ಫೆಸ್ಟ್ನ ರೆಡ್ ಕಾರ್ಪೇಟ್ನ ಮೇಲೆ ಇತರೆ ಕೆಲವು ಸೆಲೆಬ್ರಿಟಿಗಳೊಟ್ಟಿಗೆ ಹೆಜ್ಜೆ ಹಾಕಿದರು. ನೂರಾರು ಕ್ಯಾಮರಾಮನ್ಗಳಿಗೆ ಫೋಸು ಸಹ ನೀಡುತ್ತಿದ್ದರು. ಆದರೆ ಅಲ್ಲಿದ್ದ ಭದ್ರತೆಯವರು ಊರ್ವಶಿ ರೌಟೆಲಾ ಅವರನ್ನು ಬಲವಂತದಿಂದ ಹೊರಗೆ ಕಳಿಸಿದರು. ಊರ್ವಶಿಯನ್ನು ಭದ್ರತೆಯವರು ರೆಡ್ ಕಾರ್ಪೆಟ್ನಿಂದ ಹೊರಗೆ ಬರಲು ಸೂಚಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಸಲಿಗೆ ಅಲ್ಲಿ ಆಗಿದ್ದೇ ಬೇರೆ. ಈ ಬಾರಿ ಕಾನ್ ರೆಡ್ ಕಾರ್ಪೆಟ್ ವಾಕ್ಗೆ ಕೆಲವು ನಿಯಮಗಳನ್ನು ಮಾಡಲಾಗಿದೆ. ಉಡುಪುಗಳ ಬಗ್ಗೆ ಹಾಗೂ ರೆಡ್ ಕಾರ್ಪೆಟ್ ಮೇಲೆ ಎಷ್ಟು ಹೊತ್ತು ಇರಬಹುದು ಎಂಬ ಬಗ್ಗೆ ನಿಯಮಗಳನ್ನು ಮಾಡಲಾಗಿದೆ. ಪ್ರತಿ ವರ್ಷ ರೆಡ್ ಕಾರ್ಪೆಟ್ ವಾಕ್ ನಿಂದಾಗಿ ಸಿನಿಮಾ ಪ್ರದರ್ಶನ ಹಾಗೂ ಇತರೆ ಕಾರ್ಯಕ್ರಮ ತಡವಾಗುತ್ತಿರುವ ಕಾರಣ ಈ ನಿಯಮ ಮಾಡಲಾಗಿದೆ. ಆದರೆ ರೆಡ್ ಕಾರ್ಪೆಟ್ ಮೇಲೆ ನಡೆದ ಊರ್ವಶಿ ನಿಗದಿತ ಸಮಯಕ್ಕಿಂತಲೂ ಹೆಚ್ಚು ಹೊತ್ತು ರೆಡ್ ಕಾರ್ಪೆಟ್ ಮೇಲೆ ನಿಂತು ಕ್ಯಾಮೆರಾಕ್ಕೆ ಫೋಸು ನೀಡುತ್ತಿದ್ದರು. ಇದೇ ಕಾರಣಕ್ಕೆ ಭದ್ರತೆಯವರು ನಟಿಯನ್ನು ಹೊರಗೆ ಕರೆದರು ಎನ್ನಲಾಗುತ್ತಿದೆ.
ಇದನ್ನೂ ಓದಿ:ನಾಲಗೆ ಹರಿಬಿಟ್ಟ ಊರ್ವಶಿ ರೌಟೆಲಾ, ಎಚ್ಚರಿಕೆ ನೀಡಿದ ದೇವಿ ಆರಾಧಕರು
ಏನೇ ಆಗಲಿ, ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಊರ್ವಶಿ ರೌಟೆಲಾ ಕಾನ್ ಸಿನಿಮೋತ್ಸವದಲ್ಲಿ ಗಮನ ಸೆಳೆದಿದ್ದಾರೆ. ಬಲು ಅದ್ಧೂರಿಯಾಗಿ ಕಾಣುತ್ತಿದ್ದ ಉಡುಗೆಯನ್ನು ಊರ್ವಶಿ ಧರಿಸಿದ್ದರು. ಊರ್ವಶಿ ಧರಿಸಿದ್ದ ಉಡುಗೆಯ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿಗಳಂತೆ. ಅದರ ಜೊತೆಗೆ ಒಂದು ಗಿಣಿಯನ್ನು ಸಹ ಊರ್ವಶಿ ಹಿಡಿದುಕೊಂಡಿದ್ದರು. ಅದೂ ಸಹ ಸಖತ್ ಗಮನ ಸೆಳೆಯಿತು. ಊರ್ವಶಿ ಪ್ರಸ್ತುತ ‘ವೆಲ್ ಕಮ್ ಟು ಜಂಗಲ್’, ‘ಕಸೂರ್ 2’ ಮತ್ತು ತೆಲುಗಿನ ‘ಬ್ಲಾಕ್ ರೋಸ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ