ದಕ್ಷಿಣ ಭಾರತದ ಸಿನಿಮಾಗಳ ಎದುರಿನಲ್ಲಿ ಬಾಲಿವುಡ್ ಸಿನಿಮಾಗಳು ಮಂಕಾಗಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಕೆಲವು ಹಿಂದಿ ಸಿನಿಮಾಗಳು ಈ ವರ್ಷ ಮಕಾಡೆ ಮಲಗಿದವು. ಖಾನ್ತ್ರಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮಿರ್ ಖಾನ್ ಅವರ ಸಿನಿಮಾಗಳು ಬಾಲವುಡ್ನಲ್ಲಿ ಮೋಡಿ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್, ರಣಬೀರ್ ಕಪೂರ್ (Ranbir Kapoor), ರಣವೀರ್ ಸಿಂಗ್ ನಟನೆಯ ಚಿತ್ರಗಳು ಕೂಡ ಲಾಭ ಕಂಡಿಲ್ಲ. ಈ ಶುಕ್ರವಾರ (ಸೆ.9) ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ರಿಲೀಸ್ ಆಗುತ್ತಿದೆ. ಇತ್ತ, ಸ್ಯಾಂಡಲ್ವುಡ್ನಿಂದ ಪುನೀತ್ ರಾಜ್ಕುಮಾರ್ ಅಭಿನಯದ ‘ಲಕ್ಕಿ ಮ್ಯಾನ್’ (Lucky Man) ಚಿತ್ರ ಕೂಡ ಅದೇ ದಿನ ತೆರೆಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಗಳು ಮುಖಾಮುಖಿ ಆಗಲಿವೆ.
ಈ ಎರಡೂ ಸಿನಿಮಾಗಳ ಬುಕಿಂಗ್ ಓಪನ್ ಆಗಿದೆ. ಬೇರೆ ಬೇರೆ ಕಾರಣಗಳಿಂದಾಗಿ ಈ ಚಿತ್ರಗಳು ಗಮನ ಸೆಳೆಯುತ್ತಿವೆ. ಪುನೀತ್ ರಾಜ್ಕುಮಾರ್ ಅವರು ದೇವರ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣದಿಂದ ‘ಲಕ್ಕಿ ಮ್ಯಾನ್’ ಚಿತ್ರದ ಮೇಲೆ ಅಭಿಮಾನಿಗಳಿಗೆ ವಿಶೇಷ ಪ್ರೀತಿ ಇದೆ. ಹಾಗಾಗಿ ಮೊದಲ ದಿನ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಪ್ಪು ಅಭಿಮಾನಿಗಳು ಕಾದಿದ್ದಾರೆ.
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಬಹುತಾರಾಗಣ ಇದೆ. ಆಲಿಯಾ ಭಟ್, ರಣಬೀರ್ ಕಪೂರ್, ಅಮಿತಾಭ್ ಬಚ್ಚನ್, ನಾಗಾರ್ಜುನ ಮುಂತಾದ ಸ್ಟಾರ್ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನ ಮಾಡಿರುವ ಈ ಚಿತ್ರ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಸಾವಿರಾರು ಚಿತ್ರಮಂದಿರಗಳು ಈ ಸಿನಿಮಾಗಾಗಿ ಮೀಸಲಾಗಿವೆ.
‘ಬ್ರಹ್ಮಾಸ್ತ್ರ’ ಚಿತ್ರದ ಟ್ರೇಲರ್ ಹೆಚ್ಚು ಜನರಿಗೆ ಇಷ್ಟ ಆಗಿಲ್ಲ. ಆದರೂ ಕೂಡ ಬೆಂಗಳೂರಿನಲ್ಲಿ ಈ ಸಿನಿಮಾವನ್ನು ಜನರು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ಬುಕ್ ಮೈ ಶೋನಲ್ಲಿ ಈ ಚಿತ್ರಕ್ಕೆ 3.6 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಆದರೆ ‘ಲಕ್ಕಿ ಮ್ಯಾನ್’ ಸಿನಿಮಾವನ್ನು ಲೈಕ್ 6 ಸಾವಿರ ಜನರು ಮಾತ್ರ ಲೈಕ್ ಮಾಡಿದ್ದಾರೆ. ಹಾಗಂತ ಬುಕಿಂಗ್ ವಿಚಾರದಲ್ಲಿ ‘ಲಕ್ಕಿ ಮ್ಯಾನ್’ ಸಿನಿಮಾ ಹಿಂದೆ ಬಿದ್ದಿಲ್ಲ. ಇಂದು (ಸೆ.8) ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯುತ್ತಿದೆ. ಬಹುತೇಕ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
‘ಲಕ್ಕಿ ಮ್ಯಾನ್’ ಚಿತ್ರಕ್ಕೆ ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್, ಪ್ರಭುದೇವ ಅವರಿಂದಾಗಿ ಈ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.