
ಭಾರತದ ಬಾಕ್ಸ್ ಆಫೀಸ್ನಲ್ಲಿ (Box Office) ಸಿನಿಮಾ ಒಂದು ಸಾವಿರ ಕೋಟಿ ಗಳಿಸುವುದು ಮಹಾನ್ ಸಾಧನೆಯಾಗಿದೆ. ಆದರೆ ನೆರೆಯ ಚೀನಾದ ಸಿನಿಮಾ ಒಂದು ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿ ಗಳಿಸಿದೆ. ವಿಶೇಷವೆಂದರೆ ಈ ಸಿನಿಮಾನಲ್ಲಿ ದೊಡ್ಡ ಸ್ಟಾರ್ ನಟರು ಯಾರೂ ಇಲ್ಲ. ‘ಅವತಾರ್’, ‘ಮಿಷನ್ ಇಂಪಾಸಿಬಲ್’, ‘ಸ್ಪೈಡರ್ಮ್ಯಾನ್’ ಇನ್ನೂ ಹಲವು ದೊಡ್ಡ ಹಾಲಿವುಡ್ ಸಿನಿಮಾಗಳ ದಾಖಲೆಯನ್ನೂ ಸಹ ಈ ಚೀನೀಸ್ ಸಿನಿಮಾ ಹಿಂದಿಕ್ಕಿದ್ದು, ವಿಶ್ವ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನೇ ಬರೆಯುತ್ತಿದೆ.
ಅನಿಮೇಷನ್ ಸಿನಿಮಾ ‘ನೆ ಜ್ಹಾ 2’ ಸಿನಿಮಾ ಇದೀಗ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸುತ್ತಿದೆ. ಸುಮಾರು 71 ಕೋಟಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಈ ಅನಿಮೇಷನ್ ಸಿನಿಮಾ ಈ ವರೆಗೆ ಬಾಕ್ಸ್ ಆಫೀಸ್ನಲ್ಲಿ 18 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಕಲೆಕ್ಷನ್ ಮೊತ್ತ ಸುಮಾರು 25 ಸಾವಿರ ಕೋಟಿ ಮುಟ್ಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
‘ನೆ ಜ್ಹಾ 2’ ಸಿನಿಮಾ ಬಿಡುಗಡೆ ಆಗಿರುವುದು 2025ರ ಜನವರಿ ತಿಂಗಳಲ್ಲಿ. ಆಗಿನಿಂದ ಈಗಿನ ವರೆಗೂ ಸಿನಿಮಾ ಭರ್ಜರಿ ಕಲೆಕ್ಷನ್ ಅನ್ನು ಮುಂದುವರೆಸುತ್ತಲೇ ಬಂದಿದೆ. ಸಿನಿಮಾದ ಬಜೆಟ್ ಕೇವಲ 71 ಕೋಟಿ ರೂಪಾಯಿಗಳು. ಆದರೆ ಗಳಿಕೆ ಮಾಡಿರುವುದು 18 ಸಾವಿರ ಕೋಟಿ. ಇದೇ ವರ್ಷ ಬಿಡುಗಡೆ ಆದ ಕೆಲವು ಭಾರಿ ಬಜೆಟ್ನ ಹಾಲಿವುಡ್ ಸಿನಿಮಾಗಳಿಗೂ ಸಾಧ್ಯವಾಗದ ಯಶಸ್ಸನ್ನು ಈ ಚೈನೀಸ್ ಸಿನಿಮಾ ಮಾಡಿದೆ.
ಇದನ್ನೂ ಓದಿ:‘ಅವತಾರ್ 3’ ಬಳಿಕ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ ಮತ್ತೊಂದು ಹಾಲಿವುಡ್ ಸಿನಿಮಾ
‘ನೆ ಜ್ಹಾ 2’ ಸಿನಿಮಾ ಆಕ್ಷನ್ ಸಿನಿಮಾ ಆಗಿದ್ದು, ಭಾರತದ ಚೋಟಾ ಭೀಮ್ ರೀತಿಯಲ್ಲಿಯೇ ಪುಟ್ಟ ಬಾಲಕನೊಬ್ಬ ತನ್ನ ವಯಸ್ಸು, ಆಕಾರಕ್ಕೆ ಮೀರಿದ ಸಾಹಸಗಳನ್ನು ಮಾಡುವ ಕತೆಯನ್ನು ‘ನೆ ಜ್ಹಾ 2’ ಸಿನಿಮಾ ಒಳಗೊಂಡಿದೆ. ಹೆಸರೇ ಸೂಚಿಸುತ್ತಿರುವಂತೆ ಇದು ‘ನೆ ಜ್ಹಾ’ ಸರಣಿಯ ಎರಡನೇ ಸಿನಿಮಾ. ಸಿನಿಮಾ ಇದೇ ವರ್ಷಾರಂಭದ ಜನವರಿ 29 ರಂದು ಬಿಡುಗಡೆ ಆಗಿತ್ತು, ಅಂದಿನಿಂದ ಇಂದಿನ ವರೆಗೆ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಲೇ ಬರುತ್ತಿದೆ.
ವಿಶೇಷವೆಂದರೆ ‘ನೆ ಜ್ಹಾ 2’ ಭಾರತದಲ್ಲೂ ಬಿಡುಗಡೆ ಆಗಿತ್ತು ಆದರೆ ಸದ್ದು ಮಾಡಿರಲಿಲ್ಲ. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿತ್ತು. ಆದರೆ ಕೇವಲ ಹಿಂದಿ ಡಬ್ ಆವೃತ್ತಿಯನ್ನು ಮಾತ್ರವೇ ಬಿಡುಗಡೆ ಮಾಡಲಾಗಿತ್ತು. ಇಂಗ್ಲೀಷ್ ಸಹ ಬಿಡುಗಡೆ ಮಾಡಲಾಗಿರಲಿಲ್ಲ. ವಾರ್ನರ್ಸ್ ಬ್ರದರ್ಶ್, ಎನ್ಕೋರ್ ಸೇರಿ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದ ಯಶಸ್ಸನ್ನು ಭಾರತದಲ್ಲಿ ಈ ಸಿನಿಮಾ ಗಳಿಸಲಿಲ್ಲ.
‘ನೆ ಜ್ಹಾ 2’ ಸಿನಿಮಾ ಈಗಾಗಲೇ ಒಟಿಟಿಗೆ ಸಹ ಬಂದಿದೆ. ಆದರೆ ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲ. ಎಚ್ಬಿಓ ಮ್ಯಾಕ್ಸ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಂಗಳಲ್ಲಿ ಈ ಸಿನಿಮಾ ಲಭ್ಯವಿದೆ ಆದರೆ ಭಾರತದಲ್ಲಿ ವೀಕ್ಷಿಸಲು ಲಭ್ಯವಿಲ್ಲ, ಆದರೆ ಶೀಘ್ರವೇ ಭಾರತದಲ್ಲಿಯೂ ಸಹ ಈ ಸಿನಿಮಾ ವೀಕ್ಷಣೆಗೆ ಲಭ್ಯ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:36 am, Tue, 30 December 25