
ಕಮಲ್ ಹಾಸನ್ (Kamal haasan) ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ವಿಶ್ವ ಬಾಕ್ಸ್ ಆಫೀಸ್ನಲ್ಲಿ 231 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದಿಂದ ಕಮಲ್ ಹಾಸನ್ ಅವರು ಒಂದೊಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ‘ವಿಕ್ರಮ್’ ಗೆಲುವಿನ ಹಿನ್ನೆಲೆಯಲ್ಲಿ ಶನಿವಾರ (ಜೂನ್ 11) ತೆಲುಗು ಸ್ಟಾರ್ ನಟ ಚಿರಂಜೀವಿ ಅವರು (Chiranjeevi) ತಮ್ಮ ಮನೆಯಲ್ಲಿ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅವರು ಈ ಪಾರ್ಟಿಯ ಹೈಲೈಟ್ ಆಗಿದ್ದರು.
‘ವಿಕ್ರಮ್’ ಚಿತ್ರಕ್ಕೆ ಸಿಕ್ಕ ಯಶಸ್ಸು ತುಂಬಾನೇ ದೊಡ್ಡದು. ಈ ಚಿತ್ರದಿಂದ ಕಮಲ್ ಹಾಸನ್ ಸಖತ್ ಖುಷಿಯಾಗಿದ್ದಾರೆ. ಅವರಿಗೆ ಒಂದೊಳ್ಳೆಯ ಕಂಬ್ಯಾಕ್ ನೀಡಿದ್ದು ಮಾತ್ರವಲ್ಲದೆ, ಸಾಕಷ್ಟು ಲಾಭ ತಂದುಕೊಡುತ್ತಿದೆ ಈ ಚಿತ್ರ. ಈ ಚಿತ್ರದ ಯಶಸ್ಸನ್ನು ಸೆಲಬ್ರೇಟ್ ಮಾಡಲು ಚಿರಂಜೀವಿ ಅವರು ಪಾರ್ಟಿ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ ಕಮಲ್, ಚಿರಂಜೀವಿ, ಸಲ್ಮಾನ್ ಹಾಗೂ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್ ಭಾಗಿ ಆಗಿದ್ದರು. ಎಲ್ಲರೂ ಹೂವಿನ ಗುಚ್ಚ ಹಿಡಿದುಕೊಂಡಿದ್ದಾರೆ.
ಚಿರಂಜೀವಿ ಅವರು ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಪ್ರೀತಿಯ ಗೆಳೆಯ ಕಮಲ್ ಹಾಸನ್ ಅವರ ಯಶಸ್ಸನ್ನು ಸೆಲೆಬ್ರೇಟ್ ಮಾಡೋಕೆ ನಿಜಕ್ಕೂ ಖುಷಿ ಆಗುತ್ತಿದೆ. ಸಲ್ಲು ಭಾಯ್, ಲೋಕೇಶ್ ಕನಗರಾಜ್ ಹಾಗೂ ತಂಡ ನಮ್ಮ ಜತೆ ಇರುವುದಕ್ಕೆ ಖುಷಿ ಇದೆ. ಎಂತಹ ಅದ್ಭುತ ಸಿನಿಮಾ’ ಎಂದು ಅವರು ಬರೆದುಕೊಂಡಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಕ್ಕೆ ಸಖತ್ ಖುಷಿಯಾಗಿದ್ದಾರೆ. ಅವರು ಟ್ವಿಟರ್ನಲ್ಲಿ ಈ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ.
‘ವಿಕ್ರಮ್’ ಸಿನಿಮಾ ತಮಿಳುನಾಡಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಮೊದಲ ಏಳು ದಿನಗಳಲ್ಲಿ ಈ ಚಿತ್ರ 77 ಕೋಟಿ ರೂಪಾಯಿ ಗಳಿಸಿತ್ತು. ಈ ವೀಕೆಂಡ್ನಲ್ಲೂ ಸಿನಿಮಾವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಶುಕ್ರವಾರ (ಜೂನ್ 10) 6.12 ಕೋಟಿ ರೂಪಾಯಿ ಹಾಗೂ ಶನಿವಾರ (ಜೂನ್ 11) 7.80 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 90.97 ಕೋಟಿ ರೂಪಾಯಿ ಆಗಿದೆ. ಇಂದು (ಜೂನ್ 13) ಭಾನುವಾರ ಆದ್ದರಿಂದ ಸಿನಿಮಾದ ಗಳಿಕೆ 100 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.