ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

ನಟ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆಳವಣಿಗೆ ಚಿತ್ರರಂಗದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಹಿಂದೆ ದೊಡ್ಡ ನಟರ ಸಿನಿಮಾಗಳಿಗೆ ಮುಂಜಾನೆ ಶೋಗಳು ಇರುತ್ತಿದ್ದವು, ಆದರೆ ಘಟನೆಯೊಂದರ ನಂತರ ಅವುಗಳಿಗೆ ನಿರ್ಬಂಧ ಹೇರಲಾಗಿದೆ. ವಿಜಯ್ ಚಿತ್ರರಂಗದ ಹಿನ್ನೆಲೆಯವರು. ಆದ್ದರಿಂದ, ಅವರ ಅಧಿಕಾರಾವಧಿಯಲ್ಲಿ ಈ ಮುಂಜಾನೆಯ ಶೋಗಳನ್ನು ಮತ್ತೆ ಜಾರಿಗೆ ತಂದು, ಚಿತ್ರಮಂದಿರಗಳ ಕಷ್ಟ ನೀಗಿಸುವ ನಿರೀಕ್ಷೆ ಇದೆ.

ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?
ವಿಜಯ್
Image Credit source: PTI

Updated on: May 11, 2026 | 3:15 PM

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮೇ 10ರಂದು ನಟ ದಳಪತಿ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯಿಂದ ತಮಿಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿದ್ದು, ವಿಶೇಷವಾಗಿ ಚಿತ್ರಮಂದಿರಗಳ ಮಾಲೀಕರಲ್ಲಿ ದೊಡ್ಡ ಆಸೆ ಚಿಗುರೊಡೆದಿದೆ. ವಿಜಯ್ ಕೂಡ ಸಿನಿಮಾ ರಂಗದ ಹಿನ್ನೆಲೆ ಹೊಂದಿರುವುದರಿಂದ, ಒಂದು ದೊಡ್ಡ ಬದಲಾವಣೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

ತಮಿಳುನಾಡಿನಲ್ಲಿ ದೊಡ್ಡ ನಟರ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋ ನೀಡುವ ಸಂಪ್ರದಾಯವಿತ್ತು. ಆದರೆ, 2023ರ ಪೊಂಗಲ್ ಸಮಯದಲ್ಲಿ ಅಜಿತ್ ಕುಮಾರ್ ಅವರ ‘ತುನಿವು’ ಚಿತ್ರದ ಸಂಭ್ರಮಾಚರಣೆ ವೇಳೆ ಅಭಿಮಾನಿಯೊಬ್ಬರು ಮೃತಪಟ್ಟ ಕಾರಣ, ಸರ್ಕಾರವು ಮುಂಜಾನೆ ಪ್ರದರ್ಶನಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು.

ಸದ್ಯ ತಮಿಳುನಾಡಿನಲ್ಲಿ ಮೊದಲ ಶೋ ಆರಂಭ ಆಗೋದು ಬೆಳಿಗ್ಗೆ 9 ಗಂಟೆಯಿಂದ. ಆದರೆ ಕರ್ನಾಟಕದಲ್ಲಿ ಮುಂಜಾನೆ 6.30 ಗಂಟೆಯಿಂದ ಸಿನಿಮಾ ಪ್ರದರ್ಶನ ಮಾಡಲು ಅವಕಾಶ ಇದೆ. ಕೆಲವು ರಾಜ್ಯಗಳಲ್ಲಿ ಮಧ್ಯರಾತ್ರಿಯೂ ಶೋ ನೀಡಬಹುದು. ಆದರೆ, ಈ ಅವಕಾಶ ತಮಿಳುನಾಡಿನವರಿಗೆ ಇಲ್ಲ.

ದೊಡ್ಡ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋಗಳನ್ನು ಆಯೋಜನೆ ಮಾಡಿದರೆ ಅವುಗಳು ಹೌಸ್​ಫುಲ್ ಆಗೋದು ಪಕ್ಕಾ. ಹೀಗಾಗಿ, ಇದು ನಿರ್ಮಾಪಕರಿಗೆ ಲಾಭ. ಸಿನಿಮಾ ರಿಲೀಸ್ ದಿನ ಥಿಯೇಟರ್​ನಲ್ಲಿ ಐದು ಶೋಗಳು ಪ್ರದರ್ಶನ ಕಂಡರೆ, ಅದರಲ್ಲೂ ಹೌಸಫುಲ್ ಆದರೆ ಥಿಯೇಟರ್ ಮಾಲೀಕರು ಕೂಡ ಖುಷಿ ಪಡುತ್ತಾರೆ. ಈ ನಿಯಮ ಮತ್ತೆ ಜಾರಿಗೆ ತರಬೇಕು ಎಂಬ ಕೋರಿಕೆ ಅನೇಕರದ್ದು.

ತಮಿಳುನಾಡು ಥಿಯೇಟರ್ ಮಾಲೀಕರು ಈ ಬಗ್ಗೆ ನಿರೀಕ್ಷೆ ಹೊರಹಾಕಿದ್ದಾರೆ. ‘ವಿಜಯ್ ಅವರು ಚಿತ್ರರಂಗದಿಂದ ಬಂದವರಾದ್ದರಿಂದ ಚಿತ್ರಮಂದಿರಗಳ ಕಷ್ಟ ಅವರಿಗೆ ಗೊತ್ತು. ಮುಂಜಾನೆ ಪ್ರದರ್ಶನಗಳು ಕೇವಲ ವ್ಯಾಪಾರವಲ್ಲ, ಅದು ಚಿತ್ರಮಂದಿರದ ಜೀವನಾಡಿ. ಓಟಿಟಿ ಪೈಪೋಟಿಯ ನಡುವೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಇದು ಸಹಕಾರಿ’ ಎಂದು ಚೆನ್ನೈನ ಜಿಕೆ ಸಿನಿಮಾಸ್‌ನ ರುಬನ್ ಮಥಿವಾನನ್ ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು?

ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ ಮೇ 21 ಅಥವಾ 28ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಸಿನಿಮಾ ಸೋರಿಕೆಯಾಗಿದ್ದರೂ, ಅವರ ಅಭಿಮಾನಿಗಳಲ್ಲಿ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಸಿನಿಮಾ ರಿಲೀಸ್ ವೇಳೆ ಚೆನ್ನೈನಲ್ಲಿ ಮುಂಜಾಗೃತ ಕ್ರಮ ಕೈಗೊಂಡು ಮುಂಜಾನೆಯ ಶೋಗಳನ್ನು ಆಯೋಜನೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us