ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳಿಂದ ಅವರಿಗೆ ಸಿಕ್ಕ ಜನಪ್ರಿಯತೆ ಅಪಾರ. ಅವರಿಗೆ ದೊಡ್ಡ ದೊಡ್ಡ ಸಿನಿಮಾ ಆಫರ್ಗಳು ಹರಿದುಬರುತ್ತಿವೆ. ‘ಕೆಜಿಎಫ್ 2’ ಬಿಡುಗಡೆಗೂ ಮುನ್ನವೇ ಅವರು ತಮಿಳಿನ ‘ಕೋಬ್ರಾ’ (Cobra Movie) ಚಿತ್ರದಲ್ಲಿ ನಟಿಸಿದರು. ಈಗ ಆ ಸಿನಿಮಾ ಬಿಡುಗಡೆ ಆಗುತ್ತಿದೆ. ಖ್ಯಾತ ನಟ ಚಿಯಾನ್ ವಿಕ್ರಮ್ (Chiyaan Vikram) ಜೊತೆ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಆಗಸ್ಟ್ 31ರಂದು ಈ ಚಿತ್ರ ರಿಲೀಸ್ ಆಗಲಿದ್ದು, ಪ್ರಚಾರ ಕಾರ್ಯದಲ್ಲಿ ಇಡೀ ತಂಡ ಬ್ಯುಸಿ ಆಗಿದೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ‘ಕೋಬ್ರಾ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು.
ಚಿಯಾನ್ ವಿಕ್ರಮ್ ಅವರಿಗೆ ಆಂಧ್ರ ಮತ್ತು ತೆಲಂಗಾಣದಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಾಗಿ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ‘ಕೋಬ್ರಾ’ ಚಿತ್ರದ ಪ್ರಚಾರ ಮಾಡಲಾಗಿದೆ. ಈ ವೇಳೆ ನಟಿ ಶ್ರೀನಿಧಿ ಶೆಟ್ಟಿ ಅವರು ತೆಲುಗಿನಲ್ಲಿ ಮಾತನಾಡಿದ್ದು ಕೇಳಿ ಅಲ್ಲಿನ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶ್ರೀನಿಧಿ ಮೂಲತಃ ಕರ್ನಾಟಕದವರು. ಆದರೆ ಸಿನಿಮಾ ಸಲುವಾಗಿ ಅವರು ಬೇರೆ ಬೇರೆ ಭಾಷೆಗಳನ್ನು ಕಲಿತಿದ್ದಾರೆ.
ಸಿನಿಮಾ ಕಲಾವಿದರು ಯಾವುದೇ ಒಂದು ಭಾಷೆಗೆ ಸೀಮಿತವಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಹೆಚ್ಚಿರುವ ಈ ಸಂದರ್ಭದಲ್ಲಿ ನಟ-ನಟಿಯರು ಹಲವು ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಬೇಕಾಗುತ್ತದೆ. ಬೇರೆ ಬೇರೆ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿತಿರಬೇಕಾದ್ದು ಅನಿವಾರ್ಯ.
ಹೈದರಾಬಾದ್ನಲ್ಲಿ ಇರುವ ಅಭಿಮಾನಿಗಳು ಶ್ರೀನಿಧಿ ಶೆಟ್ಟಿ ಅವರ ಮಾತುಗಳನ್ನು ಕೇಳಿ ಖುಷಿಪಟ್ಟಿದ್ದಾರೆ. ಅಪ್ಪಟ ತೆಲುಗಿನಲ್ಲಿ ಮಾತನಾಡಿದ ‘ಕೆಜಿಎಫ್ 2’ ಬೆಡಗಿಗೆ ಅಲ್ಲಿನ ಮಂದಿ ಭೇಷ್ ಎನ್ನುತ್ತಿದ್ದಾರೆ. ತಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಅಭಿಮಾನಿಗಳಲ್ಲಿ ಶ್ರೀನಿಧಿ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಸಿನಿಮಾ ತಮಗೆ ಯಾಕೆ ಸ್ಪೆಷಲ್ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
‘ಕೋಬ್ರಾ’ ಸಿನಿಮಾಗೆ ಆರ್. ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ಹಲವು ಗೆಟಪ್ಗಳಲ್ಲಿ ವಿಕ್ರಮ್ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಪಠಾಣ್ ಕೂಡ ಈ ಸಿಮಾದಲ್ಲಿ ನಟಿಸಿರುವುದು ವಿಶೇಷ. ಎ.ಆರ್. ಹೆರಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಕೋಬ್ರಾ’ ಟ್ರೇಲರ್ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:19 am, Mon, 29 August 22