
ರಜನೀಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಆಗಸ್ಟ್ 14 ರಂದು ತೆರೆಗೆ ಬರಲಿದ್ದು, ಸಿನಿಮಾ ಕುರಿತಂತೆ ಪ್ರಚಾರ ಈಗಾಗಲೇ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಮಾಸ್ ಹಾಡೊಂದು ಬಿಡುಗಡೆ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ತೆಲುಗಿನ ಸ್ಟಾರ್ ನಟ ನಾಗಾರ್ಜುನ, ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಕನ್ನಡದ ನಟ ಉಪೇಂದ್ರ ನಟಿಸಿದ್ದಾರೆ. ಸಿನಿಮಾದ ಪ್ರಚಾರ ಪ್ರಾರಂಭವಾಗುತ್ತಿರುವ ಸಮಯದಲ್ಲಿ ನಾಗಾರ್ಜುನ ಹಾಗೂ ರಜನೀಕಾಂತ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿದೆ.
‘ಕೂಲಿ’ ಸಿನಿಮಾದ ತೆಲುಗು ಡಬ್ಬಿಂಗ್ ಮತ್ತು ಆಂಧ್ರ-ತೆಲಂಗಾಣ ವಿತರಣೆ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆಯಂತೆ. ತಮಿಳಿನ ಇನ್ಯಾವುದೇ ಸಿನಿಮಾಗಳ ತೆಲುಗು ಡಬ್ಬಿಂಗ್ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಈ ವರೆಗೆ ಮಾರಾಟ ಆಗಿಲ್ಲವಂತೆ. ಇದಕ್ಕೆ ನಾಗಾರ್ಜುನ ನಟಿಸಿರುವುದೇ ಕಾರಣ ಎಂದು ನಾಗಾರ್ಜುನ ಅಭಿಮಾನಿಗಳು ಎದೆ ತಟ್ಟಿಕೊಂಡಿದ್ದಾರೆ. ಆದರೆ ಇದು ರಜನೀಕಾಂತ್ ಅಭಿಮಾನಿಗಳ ಅಸಹನೆಗೆ ಕಾರಣ ಆಗಿದೆ.
ನಾಗಾರ್ಜುನ ಇರುವ ಕಾರಣಕ್ಕೆ ತೆಲುಗು ರಾಜ್ಯಗಳಲ್ಲಿ ಸಿನಿಮಾಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ನಾಗಾರ್ಜುನ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಸಹಿಸದ ರಜನೀಕಾಂತ್ ಅಭಿಮಾನಿಗಳು, ಈ ಹಿಂದೆ ನಾಗಾರ್ಜುನ ಸೋಲೊ ಹೀರೋ ಆಗಿ ನಟಿಸಿದ್ದ ಸಿನಿಮಾಗಳ ಕಳಪೆ ಪ್ರದರ್ಶನದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ‘ನಿಮ್ಮ ಹೀರೋ ಮೌಲ್ಯ ಇಷ್ಟೆ’ ಎಂದು ಅಣಕಿಸಿದ್ದಾರೆ. ರಜನೀಕಾಂತ್ ಸಿನಿಮಾ ಆಗಿರುವ ಕಾರಣಕ್ಕೆ ಎಲ್ಲ ರಾಜ್ಯಗಳಲ್ಲಿಯೂ ಸಿನಿಮಾಕ್ಕೆ ಬೇಡಿಕೆ ಇದೆ, ಬೇರೆ ನಟರು ನಟಿಸಿದ್ದಾರೆ ಎಂಬ ಕಾರಣಕ್ಕೆ ಅಲ್ಲ ಎಂದು ಅಹಂ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ:ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
ನಾಗಾರ್ಜುನ ಅಭಿಮಾನಿಗಳು ಸಹ ರಜನೀಕಾಂತ್ ಅವರ ‘ಲಾಲ್ ಸಲಾಂ’ ಇನ್ನಿತರೆ ಸೋತ ಸಿನಿಮಾಗಳ ಕಲೆಕ್ಷನ್ ಮಾಹಿತಿಯನ್ನು ಹಂಚಿಕೊಂಡು ಎದುರುತ್ತರ ಕೊಡುತ್ತಿದ್ದಾರೆ. ಅಂದಹಾಗೆ, ಧನುಶ್ ಜೊತೆಗೆ ನಾಗಾರ್ಜುನ ನಟಿಸಿರುವ ‘ಕುಬೇರ’ ಸಿನಿಮಾ ನೂರು ಕೋಟಿ ಕಲೆಕ್ಷನ್ ದಾಟಿದ್ದು, ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ ದೊಡ್ಡ ಹಿಟ್ ಅಗಿದೆ. ಆದರೆ ಧನುಶ್ ಇದ್ದ ಹೊರತಾಗಿಯೂ ತಮಿಳುನಾಡಿನಲ್ಲಿ ಒಳ್ಳೆಯ ಪ್ರದರ್ಶನ ತೋರಿಲ್ಲ. ‘ಕುಬೇರ’ ಸಿನಿಮಾ ಸಹ ನಾಗಾರ್ಜುನ ಕಾರಣಕ್ಕೆ ಹಿಟ್ ಆಗಿದೆ ಎಂದು ಅಭಿಮಾನಿಗಳು ವಾದಿಸಿದ್ದಾರೆ.
ಅಂದಹಾಗೆ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಲೋಕೇಶ್ ಕನಗರಾಜ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಆಮಿರ್ ಖಾನ್, ನಾಗಾರ್ಜುನ ಮತ್ತು ಉಪೇಂದ್ರ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ