ರಜನೀಕಾಂತ್ ಆಪ್ತ, ಹಿರಿಯ ನಟ ರಾಜೇಶ್ ನಿಧನ
Rajinikanth-Kamal Haasan: ತಮಿಳು ಚಿತ್ರರಂಗದ ಹಿರಿಯ ನಟ ರಾಜೇಶ್ ನಿಧನ ಹೊಂದಿದ್ದಾರೆ. ರಜನೀಕಾಂತ್-ಕಮಲ್ ಹಾಸನ್ ಕಾಲಘಟ್ಟದಲ್ಲಿಯೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರಾಜೇಶ್, ಇಬ್ಬರು ಮೇರು ನಟರ ನಡುವೆ ತಮ್ಮದೇ ಆದ ಭಿನ್ನ ದಾರಿಯನ್ನು ಕಂಡುಕೊಂಡು, ಹಲವು ಅದ್ಭುತ ಸಿನಿಮಾ ಹಾಗೂ ಪಾತ್ರಗಳನ್ನು ನೀಡಿದ್ದಾರೆ.

ತಮಿಳು ಚಿತ್ರರಂಗದ ಹಿರಿಯ ನಟ, ರಜನೀಕಾಂತ್ (Rajinikanth) ಅವರ ಆಪ್ತ ರಾಜೇಶ್ ಮೇ 29 ರಂದು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ರಾಜೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್-ಎಂಜಿಆರ್ ಕಾಲಘಟ್ಟದ ಬಳಿಕ ಬಂದ ರಜನೀಕಾಂತ್-ಕಮಲ್ ಹಾಸನ್ ಕಾಲಘಟ್ಟದಲ್ಲಿಯೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರಾಜೇಶ್, ಇಬ್ಬರು ಮೇರು ನಟರ ನಡುವೆ ತಮ್ಮದೇ ಆದ ಭಿನ್ನ ದಾರಿಯನ್ನು ಕಂಡುಕೊಂಡು, ಹಲವು ಅದ್ಭುತ ಸಿನಿಮಾ ಹಾಗೂ ಪಾತ್ರಗಳನ್ನು ನೀಡಿದ್ದಾರೆ.
1974 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ರಾಜೇಶ್ ಅವರು ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಜನೀಕಾಂತ್ ಆಕ್ಷನ್ ಹೀರೋ ಆಗಿ, ಕಮಲ್ ಹಾಸನ್ ರೊಮ್ಯಾಂಟಿಕ್ ಹೀರೋ ಆಗಿ ಮಿಂಚುತ್ತಿದ್ದ ಕಾಲದಲ್ಲಿ ರಾಜೇಶ್ ಸಾಮಾನ್ಯ ವ್ಯಕ್ತಿಯ ಪಾತ್ರಗಳಿಂದಲೇ ಬಹುವಾಗಿ ಗಮನ ಸೆಳೆದಿದ್ದರು. ಅವರ ಸಿನಿಮಾಗಳಲ್ಲಿ ಸಾಮಾಜಿಕ ಸಂದೇಶಗಳು ಇರುತ್ತಿದ್ದವು. ತಮ್ಮ ಸಿನಿಮಾಗಳಲ್ಲಿ ಅವರು ಜನ ಸ್ನೇಹಿ ವ್ಯಕ್ತಿಯ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.
ತಮಿಳು ಮಾತ್ರವೇ ಅಲ್ಲದೆ ಮಲಯಾಳಂ ತೆಲುಗು ಸಿನಿಮಾಗಳಲ್ಲಿಯೂ ರಾಜೇಶ್ ನಟಿಸಿದ್ದರು. ರಾಜೇಶ್ ಅವರು ನಟನಾಗಿ ಮಾತ್ರವೇ ಅಲ್ಲದೆ ಲೇಖಕನಾಗಿ, ಯೂಟ್ಯೂಬರ್ ಆಗಿ ಯಶಸ್ವಿ ಉದ್ಯಮಿಯಾಗಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ಯಾವುದೇ ವಿವಾದಗಳಿಗೆ ಅತೀತರಾಗಿ ಎಲ್ಲರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದ ರಾಜೇಶ್ ತಮಿಳಿನವರ ಮೆಚ್ಚಿನ ನಟರಾಗಿದ್ದರು.
ರಿಯಲ್ ಎಸ್ಟೇಟ್ ಉದ್ಯಮಿ, ಬಿಲ್ಡರ್ ಸಹ ಆಗಿದ್ದ ರಾಜೇಶ್ ಅವರು 1985 ರಲ್ಲಿಯೇ ಸಿನಿಮಾ ಚಿತ್ರೀಕರಣಕ್ಕಾಗಿ ಎಂದೇ ದೊಡ್ಡ ಬಂಗ್ಲೆ ಕಟ್ಟಿಸಿದ್ದರು. ಆ ಬಂಗ್ಲೆಯಲ್ಲಿ ತಮಿಳಿನ ಹಲವಾರು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಆ ಬಳಿಕ 1993 ರಲ್ಲಿ ಅದನ್ನು ಮಾರಾಟ ಮಾಡಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇಳಿದರು. ಹೋಟೆಲ್, ಅಪಾರ್ಟ್ಮೆಂಟ್ಗಳನ್ನು ಅವರು ಕಟ್ಟಿಸಿದ್ದಾರೆ.
ರಾಜೇಶ್ ನಿಧನಕ್ಕೆ ತಮಿಳು ಚಿತ್ರರಂಗದ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ರಜನೀಕಾಂತ್ ಟ್ವೀಟ್ ಮಾಡಿ, ‘ರಾಜೇಶ್ ನನ್ನ ಅತ್ಯಂತ ಆಪ್ತ ನಟ, ಅವರು ಹೃದಯವಂತ ವ್ಯಕ್ತಿಯಾಗಿದ್ದರು. ಅವರ ಸಾವು ನನಗೆ ಆಘಾತ ತಂದಿದೆ’ ಎಂದಿದ್ದಾರೆ. ನಟ ಕಮಲ್ ಹಾಸನ್ ಟ್ವೀಟ್ ಮಾಡಿ, ‘ರಾಜೇಶ್ ಅವರು ಪರಿಪೂರ್ಣ ನಟ, ಅವರು ಜ್ಞಾನಕ್ಕಾಗಿ ಹಾತೊರೆಯುತ್ತಿದ್ದರು. ಓದುವುದು ಅವರ ಬಹು ಮುಖ್ಯ ಹವ್ಯಾಸವಾಗಿತ್ತು. ಅಂತಿಮ ದಿನಗಳ ವರೆಗೂ ಅವರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




