ಡಾಲಿ ಧನಂಜಯ್ (Daali Dhananjay) ಪೊಲೀಸ್ ಪಾತ್ರದಲ್ಲಿ ನಟಿಸಿರುವ ಹೊಯ್ಸಳ (Hoysala) ಸಿನಿಮಾದ ಮೊದಲ ಹಾಡು ಇಂದು (ಫೆಬ್ರವರಿ 25) ರಂದು ಆನಂದ್ ಆಡಿಯೋ ಯೂಟ್ಯೂಬ್ (YouTube) ಚಾನೆಲ್ನಲ್ಲಿ ಬಿಡುಗಡೆ ಆಗಿದೆ. ‘ಸಲ ಸಲ ಹೊಯ್ಸಳ ಎಂದು ಆರಂಭವಾಗುವ ಈ ಹಾಡು ನಾಯಕನ ಖಡಕ್ ವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಡುತ್ತಿದೆ.
ಯಾರಿಲ್ಲ ಪಿಸ್ತೂಲೆ ಅವನ ದೋಸ್ತಿ ಎನ್ನುವ ಹಾಡಿನ ಸಾಲುಗಳು ಸಿನಿಮಾದಲ್ಲಿ ನಾಯಕ ಡಾಲಿ ಧನಂಜಯ್ ಪಕ್ಕಾ ರಫ್ ಆಂಡ್ ಟಫ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸ್ಪಷ್ಟ ಸುಳಿವು ನೀಡಿವೆ. ಜೊತೆಗೆ ಹಾಡಿನ ಮುನ್ನೆಲೆಯಲ್ಲಿ ಬಳಸಿರುವ ವಿಡಿಯೋ ತುಣುಕುಗಳು ಸಹ ಇದನ್ನೇ ಸಾರುತ್ತಿವೆ.
ನಿರ್ದೇಶಕ ಸಂತೋಶ್ ಆನಂದ್ರಾಮ್ ಈ ಹಾಡಿಗೆ ಸಾಹತ್ಯ ಒದಗಿಸಿದ್ದು, ನಾಯಕನ ವ್ಯಕ್ತಿತ್ವ, ಪೊಲೀಸ್ ವೃತ್ತಿಯನ್ನು ಕಠಿಣವಾಗಿ ನಿಭಾಯಿಸುವ ವಿಧಾನವನ್ನು ರಂಜನೀಯವಾಗಿ ವರ್ಣಿಸಿದ್ದಾರೆ. ಅದಕ್ಕೆ ತಕ್ಕ ಟ್ಯೂನ್ ಹಾಗೂ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್. ಹಾಡನ್ನು ಹಾಡಿರುವುದು ನಕಶ್ ಅಜೀಜ್.
ಹೊಯ್ಸಳ ಸಿನಿಮಾವು ಡಾಲಿ ಧನಂಜಯ್ರ 25ನೇ ಸಿನಿಮಾ ಆಗಿದ್ದು, ಪೊಲೀಸ್ ಪಾತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಇದು ಅವರ ಮೊದಲ ಸಿನಿಮಾ. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ. ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ.
ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ರಗಡ್ ಆಗಿದ್ದ ಟೀಸರ್ ಅನ್ನು ಡಾಲಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯ ಶೀಘ್ರವೇ ಪ್ರಾರಂಭವಾಗಲಿದ್ದು, ಮಾರ್ಚ್ 30 ರಂದು ಸಿನಿಮಾ ಬಿಡುಗಡೆ ಆಗಲಿದೆ.
ಹೊಯ್ಸಳ ಸಿನಿಮಾದ ಹೊರತಾಗಿ ಡಾಲಿ ಧನಂಜಯ್ ಇನ್ನೂ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡಿ, ಉತ್ತರಕಾಂಡ, ಪುಷ್ಪ 2, ದ್ವಿಭಾಷಾ ಸಿನಿಮಾ ತಮಿಳಿನ ಪಾಯುಂ ಒಲಿ ನೀ ಎನಕ್ಕುಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Published On - 2:09 pm, Sat, 25 February 23