
ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರು ತಮ್ಮ ಮಾಜಿ ಪ್ರೇಮಿಯೊಬ್ಬರ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದ ಬೆನ್ನಲ್ಲೇ, ತಮಿಳು ನಟ ಧ್ರುವ್ ವಿಕ್ರಮ್ ಅವರು ತಮ್ಮ ವೈಯಕ್ತಿಕ ಜೀವನದ ಮೇಲಿನ ಟೀಕೆ ಮತ್ತು ಚರ್ಚೆಗಳ ಬಗ್ಗೆ ಮೌನ ಮುರಿದಿದ್ದಾರೆ. ‘ಬೈಸನ್ ಕಾಲಮಾದನ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಧ್ರುವ್ ವಿಕ್ರಮ್ (Dhruv Vikram) ಹಾಗೂ ಅನುಪಮಾ ನಡುವೆ ಬ್ರೇಕಪ್ ಆಗಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಸಮಯದಲ್ಲೇ ಈ ಹೇಳಿಕೆ ಹೊರಬಿದ್ದಿದೆ.
ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧ್ರುವ್ ವಿಕ್ರಮ್‌ಗೆ ವೈಯಕ್ತಿಕ ಜೀವನದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ಹೇಗೆ ಎದುರಿಸುತ್ತೀರಿ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಧ್ರುವ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇವೆಲ್ಲವೂ ನನ್ನ ಮೇಲೆ ಪ್ರಭಾವ ಬೀರಿಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಆದರೆ, ನೀವು ವಾಸ್ತವದಲ್ಲಿ ನೆಲೆನಿಂತು ಬದುಕುವುದು ಬಹಳ ಮುಖ್ಯ. ನೀವು ಯಾರು, ನಿಮ್ಮ ನಿಲುವುಗಳೇನು ಮತ್ತು ನೀವು ಪ್ರೀತಿಸುವ ಜನರನ್ನು ಹಾಗೂ ನಿಮ್ಮ ಜೀವನದಲ್ಲಿ ಪ್ರಾಮುಖ್ಯತೆ ಹೊಂದಿರುವ ವಿಷಯಗಳನ್ನು ತೀವ್ರವಾಗಿ ರಕ್ಷಿಸಿಕೊಳ್ಳುವುದು ಮುಖ್ಯ. ನೀವು ಸತ್ಯದ ಪರವಾಗಿ ನಿಂತಾಗ, ಈ ಎಲ್ಲಾ ಟೀಕೆ-ಚರ್ಚೆಗಳು ನಿರ್ದಿಷ್ಟ ಮಿತಿಯಲ್ಲಷ್ಟೇ ಉಳಿಯುತ್ತವೆ. ಪ್ರತಿಯೊಬ್ಬರೂ ತಮ್ಮದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು, ಒಳಗಿನಿಂದ ಬಲಶಾಲಿಯಾಗುವುದನ್ನು ಕಲಿಯುತ್ತಾರೆ’ ಎಂದ ಧ್ರುವ್ ವಿಕ್ರಮ್ ಹೇಳಿದ್ದಾರೆ.
ಇದೇ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ವಿಡಿಯೋ ಎಡಿಟ್ ಮಾಡುವುದು, ಫೋಟೋ-ವಿಡಿಯೋಗಳನ್ನು ಶೂಟ್ ಮಾಡುವುದು ಎಂದರೆ ತುಂಬಾ ಇಷ್ಟ. ಆದರೆ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಿಲ್ಲ. ಸಿನಿಮಾಗಳ ಪ್ರಚಾರದ ಸಮಯದಲ್ಲಿ ಮಾತ್ರ ನಾನು ಆ್ಯಕ್ಟಿವ್ ಆಗಿರುತ್ತೇನೆ, ಉಳಿದ ಸಮಯದಲ್ಲಿ ಪುಸ್ತಕ ಓದುವುದು ಹಾಗೂ ಸಂಗೀತ ಕೇಳುವುದರಲ್ಲಿ ಮಗ್ನನಾಗಿರುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: ಧ್ರುವ್ ವಿಕ್ರಮ್ ನಿಯಂತ್ರಣದಲ್ಲಿದ್ದ ನಟಿ ಅನುಪಮಾ ಪರಮೇಶ್ವರನ್? ಹಳೆಯ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾಗೆ ಮತ್ತೆ ಮರಳಿದ್ದ ಅನುಪಮಾ ಪರಮೇಶ್ವರನ್, ‘ಯಾರ ಅನುಮತಿ, ಪೋಸ್ಟ್‌ನ ಕ್ಯಾಪ್ಷನ್ ಅಥವಾ ಹಾಡಿನ ಆಯ್ಕೆಗಾಗಿ ಕಾಯದೇ ಇರುವಾಗ ಪೋಸ್ಟ್ ಮಾಡುವುದು ಅತ್ಯಂತ ಸಂತೋಷ ನೀಡುತ್ತದೆ’ ಎಂದು ಬರೆದುಕೊಂಡಿದ್ದರು. ಅಲ್ಲದೆ ಧನ್ಯಾ ವರ್ಮಾ ಅವರ ಯೂಟ್ಯೂಬ್ ಸಂದರ್ಶನದಲ್ಲಿ, ತಮ್ಮ ಮಾಜಿ ಪ್ರೇಮಿಯನ್ನು ನಟ ವಿಕ್ರಮ್ ಅಭಿನಯದ ‘ಅನ್ನಿಯನ್’ ಪಾತ್ರಕ್ಕೆ ಹೋಲಿಸಿ, ಆತ ಅತ್ಯಂತ ನಿಯಂತ್ರಣ ಸಾಧಿಸುವ ವ್ಯಕ್ತಿಯಾಗಿದ್ದ ಎಂದು ಗಂಭೀರ ಆರೋಪ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.