‘ಸತ್ಲುಜ್’ ಸಿನಿಮಾ ವಿವಾದ; ಒಟಿಟಿ ಬ್ಯಾನ್ ಬೆನ್ನಲ್ಲೇ ಐಎಂಡಿಬಿ ರೇಟಿಂಗ್ ಮಾಯ

ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಸಿನಿಮಾಗೆ ಒಂದಲ್ಲಾ ಒಂದು ವಿಘ್ನ ಎದುರಾಗುತ್ತಲೇ ಇದೆ. ಮೊದಲು ಸೆನ್ಸಾರ್ ಸಮಸ್ಯೆ ಆಗಿತ್ತು. ಬಳಿಕ ಈ ಸಿನಿಮಾವನ್ನು ಒಟಿಟಿಯಿಂದ ತೆಗೆದುಹಾಕಲಾಗಿತ್ತು. ಈ ಸಿನಿಮಾಗೆ ಐಎಂಡಿಬಿ ರೇಟಿಂಗ್ ಕೂಡ ಈಗ ಇಲ್ಲದಂತಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಸತ್ಲುಜ್’ ಸಿನಿಮಾ ವಿವಾದ; ಒಟಿಟಿ ಬ್ಯಾನ್ ಬೆನ್ನಲ್ಲೇ ಐಎಂಡಿಬಿ ರೇಟಿಂಗ್ ಮಾಯ
Satluj
Image Credit source: IMDb

Updated on: Jul 08, 2026 | 4:48 PM

ಮುಖ್ಯಾಂಶಗಳು

  • ವಿವಾದದ ಸುಳಿಯಲ್ಲಿ ಸಿಲುಕಿದೆ ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಸಿನಿಮಾ.
  • ವಿವಾದಾತ್ಮಕ ಕಥಾವಸ್ತು ಇದೆ ಎಂಬ ಕಾರಣಕ್ಕೆ ಈ ಚಿತ್ರಕ್ಕೆ ಎದುರಾಗುತ್ತದೆ ತೊಂದರೆ.
  • ಒಟಿಟಿಯಲ್ಲಿ ನಿಷೇಧಕ್ಕೆ ಒಳಗಾದ ಬಳಿಕ ಚಿತ್ರದ ಐಎಂಡಿಬಿ ರೇಟಿಂಗ್ ಸಹ ಕಾಣುತ್ತಿಲ್ಲ.

ಬಾಲಿವುಡ್ ಮತ್ತು ಪಂಜಾಬಿ ಚಿತ್ರರಂಗದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ (Satluj) ಸಿನಿಮಾ ದಿನಕ್ಕೊಂದು ಹೊಸ ವಿವಾದದ ಮೂಲಕ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನಾಧಾರಿತ ಈ ಬಯೋಪಿಕ್, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಈಗ ಈ ಚಿತ್ರದ ಅಧಿಕೃತ ಐಎಂಡಿಬಿ (IMDb) ರೇಟಿಂಗ್ಸ್ ದಿಢೀರನೆ ನಾಪತ್ತೆಯಾಗಿದೆ.

ಬುಧವಾರ (ಜುಲೈ 8) ಮಧ್ಯಾಹ್ನದವರೆಗೆ ಆಲಿಯಾ ಭಟ್ ನಟನೆಯ ‘ಆಲ್ಫಾ’ ಮತ್ತು ಅಕ್ಷಯ್ ಕುಮಾರ್ ಅವರ ‘ವೆಲ್ಕಮ್ ಟು ದಿ ಜಂಗಲ್’ ನಂತಹ ಇತ್ತೀಚಿನ ಚಿತ್ರಗಳ ಐಎಂಡಿಬಿ ರೇಟಿಂಗ್ಸ್ ಕಾಣಿಸುತ್ತಿದ್ದವು. ಆದರೆ, ಈ ಹಿಂದೆ ‘ಪಂಜಾಬ್ 95’ ಎಂದು ಹೆಸರಿಡಲಾಗಿದ್ದ, ಸದ್ಯ 9.5ರಷ್ಟು ಭರ್ಜರಿ ರೇಟಿಂಗ್ ಹೊಂದಿದ್ದ ‘ಸತ್ಲುಜ್’ ಚಿತ್ರದ ರೇಟಿಂಗ್ ಪುಟ ಮಾತ್ರ ಸಂಪೂರ್ಣವಾಗಿ ಕಾಣೆಯಾಗಿದೆ.

ಎರಡು ದಿನದಲ್ಲೇ ಒಟಿಟಿಯಿಂದ ಔಟ್:

ಕಳೆದ ವಾರವಷ್ಟೇ ಈ ಸಿನಿಮಾ ಯಾವುದೇ ಮುನ್ಸೂಚನೆ ಇಲ್ಲದೆ Zee5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಈ ಚಿತ್ರವನ್ನು ಒಟಿಟಿಯಿಂದ ಕಿತ್ತೊಗೆಯಲಾಗಿತ್ತು. ಇದಕ್ಕೂ ಮುನ್ನ, ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಬರೋಬ್ಬರಿ 127 ಕಟ್‌ಗಳನ್ನು ಸೂಚಿಸಿತ್ತು. ಆದರೆ ಚಿತ್ರದ ನಿರ್ದೇಶಕ ಹನಿ ಟ್ರೆಹಾನ್, ‘ಒಂದೇ ಒಂದು ಸೀನ್ ಕಟ್ ಮಾಡಿದರೂ ನಾವು ಚಿತ್ರದೊಂದಿಗೆ ನಮ್ಮ ಹೆಸರನ್ನು ಉಳಿಸಿಕೊಳ್ಳುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು.

ಸಂಜಯ್ ಗುಪ್ತಾ ಆಕ್ರೋಶ:

ಚಿತ್ರದ ಐಎಂಡಿಬಿ ರೇಟಿಂಗ್ ಡಿಲೀಟ್ ಆಗಿರುವುದನ್ನು ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಸಂಜಯ್ ಗುಪ್ತಾ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ನಿನ್ನೆ ರಾತ್ರಿವರೆಗೂ ಈ ಚಿತ್ರಕ್ಕೆ 9.5 ರೇಟಿಂಗ್ ಇತ್ತು. ಇಂದು ಅದು ಮಾಯವಾಗಿದೆ. ನಾನೇನೂ ಐಎಂಡಿಬಿ ರೇಟಿಂಗ್ಸ್ ಅನ್ನು ಹೆಚ್ಚು ನಂಬುವುದಿಲ್ಲ. ಆದರೆ, ಇವೆಲ್ಲ ಎಷ್ಟು ಬೋಗಸ್ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರಮಾಣಪತ್ರ ಪಡೆಯದೇ ‘ಸತ್ಲುಜ್’ ಸಿನಿಮಾ ಬಿಡುಗಡೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರೋಪ

ಪೈರಸಿ ಲಿಂಕ್ ಹಂಚಿಕೊಳ್ಳಲು ಕರೆ ನೀಡಿದ ದಿಲ್ಜಿತ್:

ಸಿನಿಮಾವನ್ನು ಜೀ5 ಒಟಿಟಿಯಿಂದ ತೆಗೆದುಹಾಕಿದ ನಂತರ ನಟ ದಿಲ್ಜಿತ್ ದೋಸಾಂಜ್ ಇನ್‌ಸ್ಟಾಗ್ರಾಮ್ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿದರು. ‘ಈಗಾಗಲೇ ಯಾರೆಲ್ಲಾ ಸಿನಿಮಾವನ್ನು ಡೌನ್‌ಲೋಡ್ ಮಾಡಿಕೊಂಡಿದ್ದೀರೋ, ಅವರೆಲ್ಲ ಇದರ ಲಿಂಕ್‌ಗಳನ್ನು ಬೇರೆಯವರಿಗೂ ತಲುಪಿಸಿ. ಈ ಸಿನಿಮಾವನ್ನು ಇನ್ಮುಂದೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ಪೈರಸಿಗೆ ಬೆಂಬಲ ನೀಡಿದರು. ಮತ್ತೊಂದೆಡೆ ಪ್ರಕಟಣೆ ಹೊರಡಿಸಿರುವ Zee5 ಸಂಸ್ಥೆಯು, ಚಿತ್ರವನ್ನು ಶೀಘ್ರದಲ್ಲೇ ಮತ್ತೆ ಒಟಿಟಿಗೆ ತರಲು ಪ್ರಯತ್ನಿಸುತ್ತಿದ್ದು, ಅಲ್ಲಿಯವರೆಗೆ ಯಾರೂ ಪೈರೇಟೆಡ್ ಲಿಂಕ್‌ಗಳನ್ನು ಬಳಸಬೇಡಿ ಎಂದು ವೀಕ್ಷಕರಲ್ಲಿ ಮನವಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us