
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಎಲ್ಲರ ಪಾಲಿಗೆ ಲಕ್ಕಿ ಹೀರೋಯಿನ್ ಆಗಿದ್ದಾರೆ. ಅವರು ಮಾಡಿದ ಎಲ್ಲ ಸಿನಿಮಾಗಳೂ ಸೂಪರ್ ಹಿಟ್ ಆಗುತ್ತಿವೆ. ಹಾಗಾಗಿ ಅವರ ಜೊತೆ ಕೆಲಸ ಮಾಡಲು ಎಲ್ಲ ನಿರ್ಮಾಪಕರು-ನಿರ್ದೇಶಕರು ನಾಮುಂದು ತಾಮುಂದೆ ಅಂತ ಬರುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ (Sita Ramam) ಸಿನಿಮಾ ಆಗಸ್ಟ್ 5ರಂದು ಬಿಡುಗಡೆ ಆಯಿತು. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ವಿಮರ್ಶಕರು ಕೂಡ ಸಿನಿಮಾವನ್ನು ಹಾಡಿ ಹೊಗಳಿದರು. ಎಲ್ಲದರ ಪರಿಣಾಮವಾಗಿ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗಿದೆ. ವಿಶ್ವಾದ್ಯಂತ ರಿಲೀಸ್ ಆದ ‘ಸೀತಾ ರಾಮಂ’ ಸಿನಿಮಾ ಈವರೆಗೆ 50 ಕೋಟಿ ರೂಪಾಯಿ ಗಳಿಕೆ (Sita Ramam Collection) ಮಾಡಿದೆ ಎಂಬುದು ರಶ್ಮಿಕಾ ಮಂದಣ್ಣ ಪಾಲಿನ ಹೆಮ್ಮೆಯ ವಿಚಾರ. ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿ ಅವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ.
ರಶ್ಮಿಕಾ ಮಂದಣ್ಣ ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಸೀತಾ ರಾಮಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಹಿಜಾಬ್ ಧರಿಸಿದ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿದ್ದರು. ಆಫ್ರೀನ್ ಎಂಬ ಮುಸ್ಲಿಂ ಹುಡುಗಿಯ ಪಾತ್ರವನ್ನು ಅವರು ಈ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಅವರ ಜೊತೆ ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಕೂಡ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ.
ಬಾಲಿವುಡ್ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ವಿಫಲ ಆಗುತ್ತಿವೆ. ಹೀಗಿರುವಾಗ ದಕ್ಷಿಣ ಭಾರತದ ಚಿತ್ರಗಳು ಧೂಳೆಬ್ಬಿಸುತ್ತಿವೆ. ಆಗಸ್ಟ್ 5ರಂದು ‘ಸೀತಾ ರಾಮಂ’ ಜೊತೆಗೆ ಬಿಡುಗಡೆ ಆದ ‘ಬಿಂಬಿಸಾರ’ ಚಿತ್ರ ಕೂಡ ಜನರಿಗೆ ಇಷ್ಟ ಆಗಿದೆ. ತೆಲುಗಿನ ಈ ಎರಡು ಚಿತ್ರಗಳ ನಡುವೆ ಸಖತ್ ಪೈಪೋಟಿ ಏರ್ಪಟ್ಟಿದೆ. ಆ ಪೈಪೋಟಿ ನಡುವೆಯೂ ವಿಶ್ವಾದ್ಯಂತ 50 ಕೋಟಿ ರೂಪಾಯಿ ಗಳಿಸುವ ಮೂಲಕ ‘ಸೀತಾ ರಾಮಂ’ ಜಯಭೇರಿ ಬಾರಿಸಿದೆ.
ಸದ್ಯ ರಶ್ಮಿಕಾ ಮಂದಣ್ಣ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಅನೇಕ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ‘ಪುಷ್ಪ 2’ ಚಿತ್ರದ ಶೂಟಿಂಗ್ ಇನ್ನಷ್ಟೇ ಆರಂಭ ಆಗಬೇಕಿದೆ. ತಮಿಳಿನಲ್ಲಿ ‘ದಳಪತಿ’ ವಿಜಯ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್, ಸಿದ್ದಾರ್ಥ್ ಮಲ್ಹೋತ್ರಾ, ರಣಬೀರ್ ಕಪೂರ್ ಮುಂತಾದ ಸ್ಟಾರ್ ಕಲಾವಿದರ ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ಆರಂಭವಾದ ಅವರ ಸಿನಿಮಾ ಪಯಣ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.