ಜಗದ್ವಿಖ್ಯಾತ ಗಾಯಲ ಎಡ್ ಶೀರನ್ (Ed Sheeran) ಭಾರತಕ್ಕೆ ಬಂದಿದ್ದಾರೆ. ಭಾರತದ ಸೆಲೆಬ್ರಿಟಿಗಳು ಎಡ್ ಶೀರನ್ ಅವರನ್ನು ಬಹಳ ಖುಷಿಯಿಂದ ಸ್ವಾಗತಿಸಿದ್ದು, ಪಾರ್ಟಿಗಳ ಮೇಲೆ ಪಾರ್ಟಿಗಳನ್ನು ನೀಡುತ್ತಿದ್ದಾರೆ. ಭಾರತಕ್ಕೆ ಬಂದ ಕೂಡಲೇ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಎಡ್ ಶೀರನ್ ಶಾಲೆಯಲ್ಲಿ ಮಕ್ಕಳ ಮುಂದೆ ಹಾಡು ಹಾಡಿದ್ದರು. ಅದಾದ ಬಳಿಕ ಶಾರುಖ್ ಖಾನ್ ಮನೆಗೆ ಹೋಗಿದ್ದರು. ಬಳಿಕ ಕಮಿಡಿಯನ್, ನಟ ಕಪಿಲ್ ಶರ್ಮಾ, ಎಡ್ ಶೀರನ್ಗಾಗಿ ಭಾರಿ ದೊಡ್ಡ ಪಾರ್ಟಿಯನ್ನು ಆಯೋಜಿಸಿದ್ದರು. ಇದೆಲ್ಲದರ ಜೊತೆಗೆ ಸಂದರ್ಶನಗಳ ಮೇಲೆ ಸಂದರ್ಶನಗಳನ್ನು ಸಹ ಈ ಖ್ಯಾತ ಗಾಯಕ ನೀಡುತ್ತಿದ್ದಾರೆ. ಭಾರತದ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿಕೊಂಡೇ ಬಂದಂತಿರುವ ಎಡ್ ಶೀರನ್, ಆಸ್ಕರ್ ಗೆದ್ದ ಭಾರತದ ಸಿನಿಮಾ ‘ಆರ್ಆರ್ಆರ್’ ಬಗ್ಗೆ ಗೌರವದಿಂದ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಎಡ್ ಶೀರನ್ಗೆ ‘ನಿಮಗೆ ‘ನಾಟು-ನಾಟು’ ಗೊತ್ತೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ಎಡ್ ಶೀರನ್, ‘ನನ್ನ ಕೆಲವು ಆಪ್ತ ಗೆಳೆಯರೊಟ್ಟಿಗೆ ಕೂತು ನಾನು ‘ಆರ್ಆರ್ಆರ್’ ಸಿನಿಮಾ ನೋಡಿದ್ದೆ. ಅದೊಂದು ಅದ್ಭುತವಾದ ಸಿನಿಮಾ, ಮೂರು ಗಂಟೆಯ ಅದ್ಭುತ ಅದು. ಹಾಡುಗಳು ಅದರಲ್ಲೂ ‘ನಾಟು-ನಾಟು’ ಬಹಳ ಅದ್ಭುತವಾದ ಹಾಡು. ಸಿನಿಮಾವನ್ನು ಕಟ್ಟಿರುವ ರೀತಿಯೂ ಅದ್ಭುತವಾದುದು, ಸಿನಿಮಾದ ಥ್ರಿಲ್ಲಿಂಗ್ ಅಂಶಕ್ಕೆ ನಾನು ಮಾರು ಹೋದೆ’ ಎಂದಿದ್ದಾರೆ.
ಇದನ್ನೂ ಓದಿ:ಮನೆಗೆ ಭೇಟಿ ನೀಡಿದ ಖ್ಯಾತ ಗಾಯಕನಿಗೆ ಉಡುಗೊರೆ ಕೊಟ್ಟ ಶಾರುಖ್ ಪತ್ನಿ ಗೌರಿ
ಎಡ್ ಶೀರನ್ ತಮ್ಮ ಸಿನಿಮಾ ಬಗ್ಗೆ ಮಾತನಾಡಿರುವ ವಿಡಿಯೋವನ್ನು ‘ಆರ್ಆರ್ಆರ್’ ತಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ‘ಎಡ್ ಶೀರನ್’ಗೆ ‘ನಾಟು-ನಾಟು’ ಮಾತ್ರವೇ ಅಲ್ಲ, ಇನ್ನೂ ಹೆಚ್ಚು ಗೊತ್ತು’ ಎಂದು ಬರೆದುಕೊಂಡಿದ್ದಾರೆ. ಸಂದರ್ಶನದಲ್ಲಿ ಎಡ್ ಶೀರನ್, ‘ಆರ್ಆರ್ಆರ್’ ಸಿನಿಮಾವನ್ನು ಬಾಲಿವುಡ್ ಸಿನಿಮಾ ಎನ್ನುತ್ತಾರೆ. ಬಳಿಕ ಸಂದರ್ಶಕಿ ಅದು ಬಾಲಿವುಡ್ ಸಿನಿಮಾ ಅಲ್ಲ ಆದರೆ ಅದು ಭಾರತೀಯ ಸಿನಿಮಾ ಎಂದು ತಿದ್ದುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಎಡ್ ಶೀರನ್ ಭಾರತ ಪ್ರವಾಸದಲ್ಲಿದ್ದು, ಭಾರತದ ಕೆಲವು ನಗರಗಳಲ್ಲಿ ಪ್ರದರ್ಶನ ನೀಡಲಿದ್ದಾರೆ. ಮಾರ್ಚ್ 16ಕ್ಕೆ ಮೊದಲ ಪ್ರದರ್ಶನ ಮುಂಬೈನಲ್ಲಿ ನಡೆಯಲಿದೆ. ಮುಂಬೈ ಶೋನ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ಪ್ರತಿ ಟಿಕೆಟ್ಗೆ 16,000 ಬೆಲೆ ನಿಗದಿ ಪಡಿಸಲಾಗಿತ್ತು. ಎಡ್ ಶೀರನ್ ಜೊತೆಗೆ ಪ್ರದೀಪ್ ಕುಲಾಡ್ ಸಹ ಪ್ರದರ್ಶನ ನೀಡಲಿದ್ದಾರೆ. ಎಡ್ ಶೀರನ್ ಕಾನ್ಸರ್ಟ್ ನೋಡಲು ಸಾವಿರಾರು ಮಂದಿ ಬರುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ