ಅಣ್ಣಾಮಲೈ ನಟಿಸಿದ ಮೊದಲ ಕನ್ನಡ ಸಿನಿಮಾ ಟ್ರೈಲರ್ ಬಿಡುಗಡೆ
Annamalai: ಮಾಜಿ ಐಪಿಎಸ್ ಅಧಿಕಾರಿ, ಹಾಲಿ ಬಿಜೆಪಿ ಮುಖಂಡ, ಭವಿಷ್ಯದ ಪ್ರಧಾನಿ ಎಂದೂ ಸಹ ಬಿಂಬಿತವಾಗುತ್ತಿರುವ ಅಣ್ಣಾಮಲೈ ಮೊದಲ ಬಾರಿಗೆ ನಟಿಸಿರುವ ಕನ್ನಡ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಮಾಜಿ ಐಪಿಎಸ್ ಅಧಿಕಾರಿ, ಪ್ರಸ್ತತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗುತ್ತಿರುವ ಅಣ್ಣಾಮಲೈ (Annamalai) ನಟಿಸಿರುವ ಮೊಟ್ಟ ಮೊದಲ ಕನ್ನಡ ಸಿನಿಮಾ ‘ಅರಬ್ಬಿ’ಯ ಟ್ರೈಲರ್ ಬಿಡುಗಡೆ ಆಗಿದೆ. ಐಪಿಎಸ್ ಅಧಿಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಬಳಿಕ ಅಣ್ಣಾಮಲೈ ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಅವರದ್ದು ಪ್ರಧಾನ ಪಾತ್ರ, ಕೆಲವು ಆಕ್ಷನ್ ದೃಶ್ಯಗಳಲ್ಲಿ ಸಹ ಅವರು ಪಾಲ್ಗೊಂಡಿದ್ದರು. ಇದೀಗ ಆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ.
ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಕನ್ನಡಿಗ ಕೆಎಸ್ ವಿಶ್ವಾಸ್ ಅವರ ಜೀವನದ ಬಗ್ಗೆ ನಿರ್ಮಿಸಲಾಗಿರುವ ‘ಅರಬ್ಬಿ’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದಾರೆ ವಿಶ್ವಾಸ್. ಕೈಗಳು ಇಲ್ಲದ ಅವರು ಸಮಾಜದಲ್ಲಿ ಹೇಗೆ ಸಮಸ್ಯೆಗಳನ್ನು ಎದುರಿಸಿದರು. ಅದೆಲ್ಲವನ್ನೂ ಮೆಟ್ಟಿನಿಂತು ಹೇಗೆ ಮೇಲೆ ಬಂದರು, ಸಾಧನೆ ಮಾಡಿದರು. ಅವರಿಗೆ ಸ್ಪೂರ್ತಿ ಏನು? ಸಹಾಯ ಮಾಡಿದವರು ಯಾರು ಎಂಬಿತ್ಯಾದಿ ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ.
‘ಅರಬ್ಬಿ’ ಸಿನಿಮಾನಲ್ಲಿ ವಿಶ್ವಾಸ್ರ ತರಬೇತುದಾರನ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ. ಅಣ್ಣಾಮಲೈ ಕೆಲವು ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕೆಲವು ಖಡಕ್ ಡೈಲಾಗ್ಗಳನ್ನು, ಸ್ಪೂರ್ತಿದಾಯಕ ಡೈಲಾಗ್ಗಳನ್ನು ಸಹ ಸಿನಿಮಾದಲ್ಲಿ ಹೊಡೆದಿದ್ದಾರೆ ಅಣ್ಣಾಮಲೈ. ಸಿನಿಮಾದ ಟ್ರೈಲರ್ನಲ್ಲಿಯೂ ಅಣ್ಣಾಮಲೈ ಕಾಣಿಸಿಕೊಂಡಿದ್ದು, ಅನುಭವಿಯಂತೆ ಅಣ್ಣಾಮಲೈ ನಟಿಸಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಇದನ್ನೂ ಓದಿ:‘ಕೈಲಾಸ’ ಸಿನಿಮಾ ಟ್ರೈಲರ್ ಬಿಡುಗಡೆ: ಇದು ನಶಾ ಲೋಕದ ಕತೆ
ಕೆಎಸ್ ವಿಶ್ವಾಸ್, ವಿದ್ಯುತ್ ಅವಘಡವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. ಆದರೆ ಛಲ ಬಿಡದೆ, ಅಂತರಾಷ್ಟ್ರೀಯ ಈಜುಗಾರರಾಗಿದ್ದಾರೆ. ವಿಶ್ವಾಸ್, ಒಳ್ಳೆಯ ನೃತ್ಯಪಟು, ಜಿಮ್ನ್ಯಾಸ್ಟಿಕ್ ಸಹ ಬಲ್ಲರು. ಕೈಯಿಲ್ಲದಿದ್ದರೂ ಅಡುಗೆ ಮಾಡಬಲ್ಲರು, ತಮ್ಮ ದಿನನಿತ್ಯದ ಎಲ್ಲ ಕೆಲಸಗಳನ್ನು ಯಾರ ಸಹಾಯವೂ ಇಲ್ಲದೆ ಸ್ವಾಲಂಬಿಯಾಗಿ ಬಾಳಬಲ್ಲರು. ಎಲ್ಲ ಇರುವವರು ಸಹ ಸೋಮಾರಿತನದಿಂದ ಬಳಲುತ್ತಿರುವಾಗ ಎರಡೂ ಕೈಯಿಲ್ಲದ್ದನ್ನು ಕೊರತೆ ಎಂದುಕೊಳ್ಳದೆ ಸಾಧನೆಗೆ ಸ್ಪೂರ್ತಿ ಎಂದುಕೊಂಡಿರುವ ವಿಶ್ವಾಸ್ ಅವರ ಜೀವನ-ಸಾಧನೆ ‘ಅರಬ್ಬಿ’ ಹೆಸರಲ್ಲಿ ತೆರೆಗೆ ಬರುತ್ತಿದೆ.
‘ಅರಬ್ಬಿ’ ಸಿನಿಮಾವನ್ನು ಆರ್ ರಾಜ್ಕುಮಾರ್ ನಿರ್ದೇಶನ ಮಾಡಿದ್ದು, ಸಿಎಸ್ ಚೇತನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸಹ ನಿರ್ಮಾಣವನ್ನು ಅನಿತಾ ಸಿದ್ಧೇಶ್ವರ್ ಮಾಡಿದ್ದಾರೆ. ಸಿನಿಮಾಕ್ಕೆ ಕಂಬದ ರಂಗ ಸಂಗೀತ ನೀಡಿದ್ದಾರೆ. ಕ್ಯಾಮೆರಾ ಹಿಡಿರುವುದು ಆನಂದ್ ದಿಂಡ್ವಾರ್, ಎಡಿಟಿಂಗ್ ಮಾಡಿರುವುದು ವಿಶ್ವ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:30 am, Fri, 15 March 24