ರಘು ಶಾಸ್ತ್ರಿ ನಿರ್ದೇಶನ, ಪರ್ಪಲ್ ರಾಕ್ ನಿರ್ಮಾಣದ ‘ಲೈನ್​ ಮ್ಯಾನ್​’ ಆಗಮನಕ್ಕೆ ದಿನಾಂಕ ನಿಗದಿ

ರಘು ಶಾಸ್ತ್ರಿ ಅವರು ‘ಲೈನ್​ ಮ್ಯಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಪರ್ಪಲ್ ರಾಕ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಮಾರ್ಚ್ 22ಕ್ಕೆ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇತ್ತೀಚೆಗೆ ನಡೆದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಲೈನ್​ ಮ್ಯಾನ್​’ ಸಿನಿಮಾ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ.

ರಘು ಶಾಸ್ತ್ರಿ ನಿರ್ದೇಶನ, ಪರ್ಪಲ್ ರಾಕ್ ನಿರ್ಮಾಣದ ‘ಲೈನ್​ ಮ್ಯಾನ್​’ ಆಗಮನಕ್ಕೆ ದಿನಾಂಕ ನಿಗದಿ
ಲೈನ್​ ಮ್ಯಾನ್​ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Mar 14, 2024 | 6:58 PM

ಸ್ಯಾಂಡಲ್​ವುಡ್​ನಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸುತ್ತಾ ಬಂದಿರುವ ‘ಪರ್ಪಲ್ ರಾಕ್’ ಸಂಸ್ಥೆಯು ಈಗ ‘ಲೈನ್ ಮ್ಯಾನ್’ (Lineman) ಸಿನಿಮಾಗೆ ಬಂಡವಾಳ ಹೂಡಿದೆ. ರಘು ಶಾಸ್ತ್ರಿ (Raghu Shastry) ನಿರ್ದೇಶನ ಮಾಡಿದ ಈ ಸಿನಿಮಾ ಮಾರ್ಚ್ 22ರಂದು ತೆರೆಕಾಣಲಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಈ ಸಿನಿಮಾ ನಿರ್ಮಾಣವಾಗಿದೆ. ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್​ ಆಗಲಿದೆ. ಬಿಡುಗಡೆ ದಿನಾಂಕ ಹತ್ತಿರ ಆದ್ದರಿಂದ ಚಿತ್ರತಂಡದವರು ಪ್ರೀ-ರಿಲೀಸ್ ಇವೆಂಟ್​ ನಡೆಸಿ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಏನೆಂದರೆ, ‘ಲ್ಯಾನ್​ ಮ್ಯಾನ್​’ ಸಿನಿಮಾದ ಕಥೆ ಲಾಕ್​ಡೌನ್ ಸಂದರ್ಭದಲ್ಲಿ ಹುಟ್ಟಿದ್ದು. ‘ಬಹಳ ಮಂದಿಗೆ ಲಾಕ್​ಡೌನ್ ಬೇರೆ ಬೇರೆ ರೀತಿಯ ಅನುಭವ ನೀಡಿದೆ. ಬೇಕಾಗಿರುವುದಕ್ಕಿಂತ ಬೇಡವಾಗಿರುವುದಕ್ಕೇ ನಾವು ಹೆಚ್ಚು ತಲೆ ಕೆಡಿಸಿಕೊಂಡಿದ್ದೇವೆ‌ ಅಂತ ನನಗೆ ಆ ಸಂದರ್ಭದಲ್ಲಿ ಎನಿಸಿತು. ಕರೆಂಟ್ ಹೋದಾಗ ಕೆ.ಇ.ಬಿ.ಗೆ ಕರೆ ಮಾಡುತ್ತೇನೆ. ಆದರೆ, ಮನೆಯಲ್ಲಿ ಅಜ್ಜಿ ಬಳಿ ಕಥೆ ಕೇಳುವ ಮನಸ್ಸು ಮಾಡುವುದಿಲ್ಲ. ಈ ಕಾಲದ ಜನರು ಭಾವನೆಗಳಿಗೆ ಸ್ಪಂದಿಸುವುದು ಕಡಿಮೆ ಆಗಿದೆ. ಈ ರೀತಿಯ ಸಾಕಷ್ಟು ಅಂಶಗಳನ್ಜು ಇಟ್ಟಕೊಂಡು ‘ಲೈನ್ ಮ್ಯಾನ್’ ಕಥೆ ಸಿದ್ಧಪಡಿಸಿದ್ದೇನೆ’ ಎಂದು ನಿರ್ದೇಶಕ ರಘು ಶಾಸ್ತ್ರಿ ಹೇಳಿದ್ದಾರೆ.

‘ನಿರ್ಮಾಪಕರಿಗೆ ಆ ಕಥೆ ಇಷ್ಟವಾಯ್ತು. ನಮ್ಮ ಊರಾದ ಚಾಮರಾಜ ನಗರದ ಚಂದಕವಾಡಿಯಲ್ಲಿ ಬಹುತೇಕ ಶೂಟಿಂಗ್​ ಮಾಡಲಾಗಿದೆ. ಶೂಟಿಂಗ್​ ಚೆನ್ನಾಗಿ ಆಗಲು ಸಹಕಾರ ನೀಡಿದ ಗ್ರಾಮಸ್ಥರಿಗೆ ಮತ್ತು ಚಿತ್ರತಂಡದವರಿಗೆ ಧನ್ಯವಾದಗಳು. ಇತ್ತೀಚೆಗೆ ನಡೆದ ಬೆಂಗಳೂರು ಸಿನಿಮೋತ್ಸವದಲ್ಲಿ ನಮ್ಮ ಈ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಮಾರ್ಚ್ 22ರಂದು ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣ ಈ ಸಿನಿಮಾಗಿದೆ. ಮಣಿಕಾಂತ್ ಕದ್ರಿ ಅವರು ಈ ಸಿನಿಮಾದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಪ್ರಚುರ ಪಿ.ಪಿ, ಜ್ಯೋತಿ ರಘು ಶಾಸ್ತ್ರೀ ಮತ್ತು ಮಣಿಕಾಂತ್ ಕದ್ರಿ ಈ ಚಿತ್ರದ ಸಹ-ನಿರ್ಮಾಪಕರು ಕೂಡ ಹೌದು.

ಇದನ್ನೂ ಓದಿ: ಮಿಲಿಯನ್​ ಮುಟ್ಟಿದ ‘ಕೋಲೆ ಕೋಲೆ..’ ಹಾಡು; ‘ರಾನಿ’ ಚಿತ್ರಕ್ಕಾಗಿ ಕಿರಣ್​ ರಾಜ್​ ಸಾಹಸ

ನಿರ್ಮಾಪಕರಲ್ಲಿ ಒಬ್ಬರಾದ ಗಣೇಶ್ ಪಾಪಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನಮ್ಮ ಪರ್ಪಲ್ ರಾಕ್ ಸಂಸ್ಥೆ ನಿರ್ಮಾಣ ಮಾಡಿದ 3ನೇ ಸಿನಿಮಾ ಇದು. ಶ್ರೀನಿವಾಸ್ ಬಿಂಡಿಗನವಿಲೆ, ಯತೀಶ್ ವೆಂಕಟೇಶ್, ಅಜಯ್ ಅಪರೂಪ್ ಮತ್ತು ನಾನು ಈ ಸಿನಿಮಾದ ನಿರ್ಮಾಪಕರು. ತೆಲುಗಲ್ಲಿ ಖ್ಯಾತಿ ಪಡೆದ ತ್ರಿಗುಣ್ ಅವರು ನಾಯಕರಾಗಿ ಅಭಿನಯಿಸಿದ್ದಾರೆ.‌ ಉಳಿದಂತೆ ಕಾಜಲ್ ಕುಂದರ್, ಮೈಕೋ ನಾಗರಾಜ್, ಬಿ. ಜಯಶ್ರೀ, ಹರಿಣಿ, ‘ತರ್ಲೆನನ್ಮಗ’ ಖ್ಯಾತಿಯ ಅಂಜಲಿ‌, ಕಮಲ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ’ ಎಂದು ಗಣೇಶ್ ಪಾಪಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.