AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

Devera: ಜೂ ಎನ್​ಟಿಆರ್, ಜಾನ್ಹವಿ ಕಪೂರ್, ಸೈಫ್ ಅಲಿ ಖಾನ್ ನಟಿಸಿರುವ ‘ದೇವರ’ ಸಿನಿಮಾದ ಮೊದಲ ಭಾಗ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಮಂಜುನಾಥ ಸಿ.
|

Updated on: Feb 16, 2024 | 5:30 PM

Share

‘RRR’ ಸಿನಿಮಾ ಭಾರಿ ದೊಡ್ಡ ಹಿಟ್ ಆದ ಬಳಿಕ ಆ ಸಿನಿಮಾದ ಸ್ಟಾರ್​ಗಳಾದ ಜೂ ಎನ್​ಟಿಆರ್ (Jr NTR) ಹಾಗೂ ರಾಮ್ ಚರಣ್ ಇಬ್ಬರ ಮೇಲೂ ನಿರೀಕ್ಷೆಗಳ ಭಾರ ಹೆಚ್ಚಾಗಿದೆ. ಇಬ್ಬರೂ ನಟರು ಆಯ್ಕೆ ಮಾಡಿಕೊಳ್ಳುವ ಮುಂದಿನ ಸಿನಿಮಾಗಳನ್ನು ‘RRR’ ಜೊತೆಗೆ ಹೋಲಿಸಿ ನೋಡುವುದು ಸಾಮಾನ್ಯ. ಹಾಗಾಗಿ ಇಬ್ಬರೂ ನಟರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ‘RRR’ ಸಿನಿಮಾ ಬಳಿಕ ರಾಮ್ ಚರಣ್ ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಾಜಮೌಳಿಯಂತೆ ಶಂಕರ್ ಸಹ ಅದ್ಧೂರಿ ಸಿನಿಮಾಗಳನ್ನು ಮಾಡಲು ಜನಪ್ರಿಯರು. ಆದರೆ ಜೂ ಎನ್​ಟಿಆರ್ ಕೊರಟಾಲ ಶಿವ ಜೊತೆಗೆ ಸಿನಿಮಾ ಮಾಡಲು ಮುಂದಾದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾದ ಪ್ರೋಮೋ ಕಂಡು ಇದು ಸಾಮಾನ್ಯ ಸಿನಿಮಾ ಅಲ್ಲವೆಂಬುದು ಅರಿವಾಗಿತ್ತು. ಇದೀಗ ಆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಜೂ ಎನ್​ಟಿಆರ್ ನಟಿಸಿ ಕೊರಟಾಲ ಶಿವ ನಿರ್ದೇಶನ ಮಾಡುತ್ತಿರುವ ಸಿನಿಮಾ ‘ದೇವರ’ ಎಂದು ಹೆಸರಿಡಲಾಗಿದ್ದು ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಎರಡು ಶೇಡ್​ಗಳಲ್ಲಿ ಜೂ ಎನ್​ಟಿಆರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಪ್ರೋಮೋ ಸಖತ್ ಗಮನ ಸೆಳೆದಿತ್ತು. ಬಿಡುಗಡೆ ಮಾಡಲಾಗಿದ್ದ ಕೆಲವು ಪೋಸ್ಟರ್​ಗಳೂ ಸಹ ವೈರಲ್ ಆಗಿದ್ದವು. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಹಂಚಿಕೊಂಡಿದೆ.

ಇದನ್ನೂ ಓದಿ:ಜೂ ಎನ್​ಟಿಆರ್​ಗೆ ಇಬ್ಬರು ನಾಯಕಿಯರು, ‘ದೇವರ’ ತಂಡಕ್ಕೆ ಮತ್ತೊಬ್ಬ ನಟಿ ಎಂಟ್ರಿ

ಜೂ ಎನ್​ಟಿಆರ್ ಸೇರಿದಂತೆ ಚಿತ್ರತಂಡದ ಪ್ರಮುಖರು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಪೋಸ್ಟರ್ ಜೊತೆಗೆ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ‘ದೇವರ’ ಸಿನಿಮಾದ ಮೊದಲ ಭಾಗ ಇದೇ ವರ್ಷ ಅಕ್ಟೋಬರ್ 10ರಂದು ಬಿಡುಗಡೆ ಆಗಲಿದೆ. ದಸರಾ ಹಬ್ಬದ ರಜೆಯ ಸಮಯದಲ್ಲಿ ‘ದೇವರ’ ಸಿನಿಮಾವನ್ನು ಬಿಡುಗಡೆ ಮಾಡಲಿದೆ ಚಿತ್ರತಂಡ. ಆ ಸಮಯದಲ್ಲಿ ಸರಣಿ ರಜೆಗಳಿದ್ದು ಅದರ ಲಾಭ ಪಡೆದುಕೊಳ್ಳುವ ಯೋಜನೆ ಚಿತ್ರತಂಡದ್ದು.

‘ದೇವರ’ ಸಿನಿಮಾದಲ್ಲಿ ಜೂ ಎನ್​ಟಿಆರ್ ಎದುರು ನಾಯಕಿಯಾಗಿ ಬಾಲಿವುಡ್ ತಾರೆ ಜಾನ್ಹವಿ ಕಪೂರ್ ನಟಿಸಿದ್ದಾರೆ. ಸಿನಿಮಾದ ವಿಲನ್ ಆಗಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾದಲ್ಲಿ ಕೆಲವು ಹಾಲಿವುಡ್ ತಂತ್ರಜ್ಞರು ಸಹ ಕೆಲಸ ಮಾಡಿದ್ದಾರೆ. ಹಾಲಿವುಡ್​ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್, ‘ದೇವರ’ ಸಿನಿಮಾಕ್ಕೆ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ