‘ಕೈಲಾಸ’ ಸಿನಿಮಾ ಟ್ರೈಲರ್ ಬಿಡುಗಡೆ: ಇದು ನಶಾ ಲೋಕದ ಕತೆ
Kailasa Kasidre: ಮಾದಕ ವಸ್ತು ಅದರ ಸುತ್ತ ನಡೆಯುವ ಕತೆಯನ್ನು ಒಳಗೊಂಡಿರುವ ‘ಕೈಲಾಸ ಕಾಸಿದ್ರೆ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಮಾದಕ ವಸ್ತು ಬಗೆಗೆ ಹಲವು ಸಿನಿಮಾಗಳು ಬಂದಿವೆ. ಇದೀಗ ಇದೇ ವಸ್ತುವನ್ನು ಇಟ್ಟುಕೊಂಡು ಹಾಸ್ಯ ಪ್ರಧಾನ ಆಕ್ಷನ್ ಥ್ರಿಲ್ಲರ್ ಕತೆಯೊಂದು ಕನ್ನಡದಲ್ಲಿ ಬರಲಿದ್ದು, ಸಿನಿಮಾದ ಟ್ರೈಲರ್ (Trailer) ಇದೀಗ ಬಿಡುಗಡೆ ಆಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಟ್ರಾನ್ಸ್’ ಹಾಡಿನ ಮೂಲಕ ಕ್ರೇಜ್ ಸೃಷ್ಟಿಸಿರುವ `ಕೈಲಾಸ ಕಾಸಿದ್ರೆ’ ಸಿನಿಮಾದ ಟ್ರೈಲರ್ ಇದೀಗ ಗಮನ ಸೆಳೆಯುತ್ತಿದೆ. ನಾಗ್ ವೆಂಕಟ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಈ ದಿನಮಾನದ ಯುವ ಜನಾಂಗದ ಕಥೆಯನ್ನೊಳಗೊಂಡಿರುವ, ಎಲ್ಲ ಅಭಿರುಚಿಯ ಯುವ ಪ್ರೇಕ್ಷಕರನ್ನೂ ಕೂಡಾ ಆವರಿಸಿಕೊಳ್ಳುವ ಕಥೆ ಇದಾಗಿದೆ ಎನ್ನುತ್ತಿದೆ ಚಿತ್ರತಂಡ.
ಈ ಹಿಂದೆ ‘ತಾರಕಾಸುರ’ ಸಿನಿಮಾದಲ್ಲಿ ರಗಡ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದವರು ರವಿ. ಚಿತ್ರವಿಚಿತ್ರ ಪಾತ್ರಗಳ ಮೂಲಕ ಅಚ್ಚರಿ ಮೂಡಿಸಿದ್ದ ರವಿ ಈ ಸಿನಿಮಾದಲ್ಲಿ ಲವರ್ ಬಾಯ್ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಇಂದಿನ ಯುವ ಜನಾಂಗದ ಒಳತೋಟಿಗಳ ಕಥೆ ಎಂಬುದನ್ನು ಸದರಿ ಟ್ರೈಲರ್ ಸಾಕ್ಷ್ಯ ನೀಡುತ್ತಿದೆ. ವಯಸ್ಸಿನ ತುಮುಲಗಳಿಗೆ ವಶವಾಗಿ, ನಶೆಯ ಜಗತ್ತಿನೊಳಗೆ ಪ್ರವೇಶಿಸುವ ಯುವಕನೋರ್ವನ ಕಥಾ ಸಾರಾಂಶವನ್ನು ಧ್ವನಿಸುವಂತಿರುವ ಈ ಟ್ರೈಲರ್ ಅನ್ನು ನಾಗ್ ವೆಂಕಟ್ ಪರಿಣಾಮಕಾರಿಯಾಗಿ ರೂಪಿಸಿದ್ದಾರೆ.
ಇದನ್ನೂ ಓದಿ:‘ರಜಾಖರ್’ ಟ್ರೈಲರ್ ಬಿಡುಗಡೆ: ಮತ್ತೊಂದು ವಿವಾದಾತ್ಮಕ ಸಿನಿಮಾ ಆಗುವ ಮುನ್ಸೂಚನೆ
ನಾಯಕ ರವಿ ಸೇರಿದಂತೆ ಒಂದಷ್ಟು ಪಾತ್ರಗಳ ಮಜಲುಗಳು ಈ ಮೂಲಕ ಪ್ರೇಕ್ಷಕರೆದುರು ತೆರೆದುಕೊಂಡಿವೆ. ದರಲ್ಲಿಯೂ ವಿಶೇಷವಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾತ್ರವಿಲ್ಲಿ ಪ್ರಧಾನವಾಗಿಯೇ ಸೆಳೆದಿದೆ. ಸೂರಜ್ ಒಂದಿಡೀ ಚಿತ್ರದ ತುಂಬಾ ಕ್ಯಾಟಿ ಆಗುವಂಥಾ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನಿಗೆ ಸರಿ ಸಮನಾಗಿರುವ ಆ ಪಾತ್ರ ಕೂಡಾ ಈ ಟ್ರೈಲರ್ ನ ಹೈಲೈಟ್ ಗಳಲ್ಲೊಂದು. ಇನ್ನುಳಿದಂತೆ ಒಂದು ಪಾತ್ರದ ಸುತ್ತಲೇ ನಿರೀಕ್ಷೆ ಮೊಳೆತುಕೊಳ್ಳುವಂಥಾ ಅಪರೂಪದ ಸೆಳೆತವೊಂದು ಈ ಟ್ರೈಲರ್ ನಲ್ಲಿ ಕಾಣಿಸುತ್ತದೆ. ಅದರ ಜೊತೆಜೊತೆಗೇ ದೃಷ್ಯ ಶ್ರೀಮಂತಿಕೆಯೂ ಸ್ಪಷ್ಟವಾಗಿ ಗೋಚರಿಸುವಂತಿದೆ. ಮಾಸ್ ಮಾತ್ರವಲ್ಲದೇ ಭರಪೂರ ನಗುವಿಗೂ ಕೊರತೆಯೇನಿಲ್ಲ ಎಂಬ ನಿಖರ ಸಂದೇಶವೊಂದು ಈ ಟ್ರೈಲರ್ ಮೂಲಕವೇ ರವಾನೆಯಾದಂತೆ ಭಾಸವಾಗುತ್ತಿದೆ. ಅಂದಹಾಗೆ, ಇದೊಂದು ಕ್ರೈಂ ಕಾಮಿಡಿ ಜಾನರಿನ ಸಿನಿಮಾ ಎಂಬ ವಿಚಾರವನ್ನು ನಿರ್ದೇಶಕರು ಹೇಳಿಕೊಂಡಿದ್ದರು. ಅದಕ್ಕೆ ತಕ್ಕುದಾದ ಪುರಾವೆಗಳು ಟ್ರೈಲರ್ ನಲ್ಲಿ ಕಾಣಿಸಿವೆ.
ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‍ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಅವರು ಮೊದಲ ಹೆಜ್ಜೆಯಲ್ಲಿಯೇ ಗಟ್ಟಿ ಕಥೆಯೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿ ಆಗಲಿದ್ದಾರೆಂಬುದಕ್ಕೂ ಈ ಟ್ರೈಲರ್ ಸಾಕ್ಷಿಯಂತಿದೆ. ಈಗಾಗಲೇ ಕೈಲಾಸ ಕಾಸಿದ್ರೆ ಚಿತ್ರ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದೇ ಮಾರ್ಚ್ 8ನೇ ತಾರೀಕಿನಂದು ಈ ಸಿನಿಮಾ ತೆರೆಗಾಣಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ