‘ರಜಾಖರ್’ ಟ್ರೈಲರ್ ಬಿಡುಗಡೆ: ಮತ್ತೊಂದು ವಿವಾದಾತ್ಮಕ ಸಿನಿಮಾ ಆಗುವ ಮುನ್ಸೂಚನೆ
Razakar: ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸಿನಿಮಾಗಳ ಮಾದರಿಯಲ್ಲೇ ಮತ್ತೊಂದು ಸಿನಿಮಾ ನಿರ್ಮಾಣವಾಗಿದ್ದು ಸಿನಿಮಾದ ಹೆಸರು ‘ರಜಾಖರ್’. ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ.

‘ದಿ ಕಾಶ್ಮೀರ್ ಫೈಲ್ಸ್’ (The Kashmir Files), ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಗಳಿಸಿದವು, ಒಂದು ವರ್ಗದ ಮೆಚ್ಚುಗೆ ಗಳಿಸಿದವು. ಈ ಸಿನಿಮಾಗಳ ಧಾತು ಒಂದೇ ಆಗಿತ್ತು, ಇಸ್ಲಾಂ ಧರ್ಮ ನಂಬುವವರು ಮಾಡಿದ್ದಾರೆ ಎನ್ನಲಾದ ಅಪರಾಧಗಳನ್ನು ಪ್ರೇಕ್ಷಕರ ಮುಂದಿಡುವುದು. ಈ ಸಿನಿಮಾಗಳಿಗೆ ಸಾಕಷ್ಟು ವಿರೋಧವೂ ವ್ಯಕ್ತವಾಯ್ತು, ಕೆಲವು ರಾಜ್ಯಗಳಲ್ಲಿ, ಕೆಲವು ದೇಶಗಳಲ್ಲಿ ಈ ಸಿನಿಮಾಗಳಿಗೆ ನಿಷೇಧ ಹೇರಲಾಯ್ತು. ಇದೀಗ ಇದೇ ಮಾದರಿಯ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ‘ರಜಾಖರ್’ ಹೆಸರಿನ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾ ಮಾರ್ಚ್ 1ಕ್ಕೆ ಬಿಡುಗಡೆ ಆಗಲಿದೆ.
‘ರಜಾಖರ್’ ಸಿನಿಮಾ ಭಾರತ ಸ್ವಾತಂತ್ರ್ಯವಾದಾಗ ಹೈದರಾಬಾದ್ ಅನ್ನು ಸ್ವತಂತ್ರ್ಯ ಭಾರತದಲ್ಲಿ ವಿಲೀನವಾಗಲು ಒಪ್ಪಿಕೊಳ್ಳದೆ ಹೈದರಾಬಾದ್ ಅನ್ನು ಸ್ವತಂತ್ರ್ಯ ರಾಜ್ಯವನ್ನಾಗಿಸುವ ಉದ್ದೇಶ ಹೊಂದಿದ್ದರು. ಆದರೆ ಈ ಉದ್ದೇಶದ ವಿರುದ್ಧ ಧಂಗೆ ಏಳುವ, ಕ್ರಾಂತಿಗೆ ಯತ್ನಿಸುವವರನ್ನು ಹತ್ತಿಕ್ಕಲು ರಜಾಕರ್ ಸೇನೆಯನ್ನು ಬಳಸಲಾಗಿತ್ತು. 1947ರಿಂದ 1948ರ ವರೆಗೆ ಈ ರಜಾಕರ್ ಸೈನ್ಯವು ಹಿಂದೂಗಳ ಮೇಲೆ, ಸ್ವಾತಂತ್ರ್ಯ ಭಾರತದಲ್ಲಿ ವಿಲೀನಗೊಳ್ಳಲು ಕ್ರಾಂತಿ ಆರಂಭಿಸಿದವರ ಮೇಲೆ ಹಿಂಸಾಚಾರ, ದೌರ್ಜನ್ಯ ಎಸಗಿತ್ತು. ಇದೇ ಘಟನೆಗಳನ್ನು ಮೂಲವಾಗಿರಿಸಿಕೊಂಡು ‘ರಜಾಖರ್’ ಹೆಸರಿನ ಸಿನಿಮಾ ಮಾಡಲಾಗಿದೆ.
ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ಚಿತ್ರವನ್ನು ಒಟಿಟಿಯಲ್ಲಿ ನೋಡುವವರಿಗೆ ಇದೆ ಸರ್ಪ್ರೈಸ್?
ಸಿನಿಮಾದ ಟ್ರೈಲರ್ನಲ್ಲಿ ‘ರಜಾಖರ್’ ನಿಂದ ಆಗಿದೆ ಎನ್ನಲಾದ ಹಿಂಸಾಚಾರವನ್ನು ಹಸಿ-ಹಸಿಯಾಗಿ ತೋರಿಸಲಾಗಿದೆ. ಟ್ರೈಲರ್ನಲ್ಲಿ ‘ರಜಾಖರ್’ರ ಹಿಂಸಾಚಾರ ಬಹುತೇಕ ಬ್ರಾಹ್ಮಣರ ಮೇಲೆಯೇ ಆಗಿತ್ತು ಎಂದು ತೋರಿಸಲಾಗಿದೆ. ಹೈದರಾಬಾದ್ ಅನ್ನು ತುರ್ಕಿಸ್ಥಾನ ಮಾಡುವ ಪ್ರಯತ್ನದಿಂದ ಹೀಗೆ ಹಿಂದುಗಳ ಮಾರಣಹೋಮ, ಅತ್ಯಾಚಾರ ಎಸಗಲಾಗಿತ್ತು ಎಂಬುದನ್ನು ಸಿನಿಮಾ ಸಾರುತ್ತಿರುವುದನ್ನು ಟ್ರೈಲರ್ ಸೂಚ್ಯವಾಗಿ ಹೇಳುತ್ತಿದೆ. ಸಿನಿಮಾದ ಟ್ರೈಲರ್ ಅನ್ನು ಕೆಲವು ದಿನಗಳ ಹಿಂದೆಯಷ್ಟೆ ನಟಿ ಕಂಗನಾ ರನೌತ್ ಬಿಡುಗಡೆ ಮಾಡಿದ್ದಾರೆ.
‘ರಜಾಖರ್’ ಸಿನಿಮಾವನ್ನು ತೆಲಂಗಾಣದ ಬಿಜೆಪಿ ಮುಖಂಡ ಗುಡೂರು ನಾರಾಯಣ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಇವರು ಬಿಜೆಪಿ ಟಿಕೆಟ್ನಿಂದ ಚುನಾವಣೆ ಸ್ಪರ್ಧೆ ಮಾಡಲಿದ್ದಾರೆ. ಆದರೆ ಈ ಸಿನಿಮಾದ ಬಗ್ಗೆ ತೆಲಂಗಾಣದ ಬಿಆರ್ಎಸ್ ಪಕ್ಷ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾದ ಬಿಡುಗಡೆ ವಿರುದ್ಧ ಹೋರಾಟ ಮಾಡುವುದಾಗಿ ಬಿಆರ್ಎಸ್ನ ಅಧ್ಯಕ್ಷ ಕೆಟಿ ರಾಮಾರಾವ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ