ಅಮಿತಾಭ್ ಬಚ್ಚನ್ ಹಾಗೂ ಪತ್ನಿ ಜಯಾ ಬಚ್ಚನ್ ಜೋಡಿಗೆ ಇಂದು 48ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಅನೇಕರಿಗೆ ಇವರ ದಾಂಪತ್ಯ ಮಾದರಿಯಾಗಿದೆ. ಇವರ ಹೊಂದಾಣಿಕೆ ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಿದೆ. ವಿಶೇಷ ಎಂದರೆ ಅಮಿತಾಭ್ ಹಾಗೂ ಜಯಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 1973ರ ಜೂನ್ 3ರಂದು ಮದುವೆ ಆಗಿದ್ದರು.
ಮಾಡರ್ನ್ ಹಾಗೂ ಟ್ರೆಡಿಷನಲ್ ಅವತಾರ ತಾಳುವ ಹುಡುಗಿ ಎಂದರೆ ಅಮಿತಾಭ್ಗೆ ಇಷ್ಟವಾಗಿತ್ತಂತೆ. ಮ್ಯಾಗಜಿನ್ ಕವರ್ ಫೋಟೋದಲ್ಲಿ ಜಯಾ ಅವರನ್ನು ನೋಡಿದಾಗ ‘ಇವಳು ನಾನು ಅಂದುಕೊಂಡ ರೀತಿಯಲ್ಲೇ ಇದ್ದಾಳೆ’ ಎಂದುಕೊಂಡಿದ್ದರಂತೆ. ಜಯಾ ಅವರ ಕಣ್ಣುಗಳು ಅಮಿತಾಭ್ಗೆ ತುಂಬಾನೇ ಇಷ್ಟವಾಗಿದ್ದವಂತೆ. ಅವರ ಜತೆಯೇ ನಟಿಸೋಕೆ ಅವಕಾಶ ಸಿಕ್ಕಾಗ ಅಮಿತಾಭ್ ಸಾಕಷ್ಟು ಖುಷಿಪಟ್ಟಿದ್ದರು.
ಆರಂಭದಲ್ಲಿ, ಅಮಿತಾಭ್ ಓರ್ವ ಫ್ಲಾಪ್ ಹೀರೋ ಎನ್ನುವ ಕಾರಣಕ್ಕೆ ಅವರ ಜತೆ ನಟಿಸೋಕೆ ನಾಯಕಿಯರು ಹಿಂದೇಟು ಹಾಕುತ್ತಿದ್ದರು. ಆ ಸಮಯದಲ್ಲೂ ಅಮಿತಾಭ್ ಜತೆ ನಟಿಸೋಕೆ ಜಯಾ ಒಪ್ಪಿದ್ದರು. ಈ ಮೂಲಕ ಜಯಾ ಹಾಗೂ ಅಮಿತಾಭ್ ಪ್ರಯಾಣ ಆರಂಭವಾಯಿತು. ಅಮಿತಾಭ್ ಹಾಗೂ ಜಯಾ ಮೊದಲ ಬಾರಿಗೆ ಭೇಟಿ ಮಾಡಿದ್ದು ಬನ್ಸಿ ಬಿರ್ಜು (1972) ಚಿತ್ರದ ಸೆಟ್ನಲ್ಲಿ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ತೆರೆಕಂಡ ಮರುವರ್ಷವೆ ‘ಜಂಜೀರ್’ ಚಿತ್ರದಲ್ಲೂ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು.
ಜಂಜೀರ್ ಸಿನಿಮಾದಲ್ಲಿ ಅಮಿತಾಭ್ ಹಾಗೂ ಜಯಾ ಹತ್ತಿರವಾದರು. ಈ ಚಿತ್ರ ಹಿಟ್ ಆದರೆ ಜಯಾ ಅವರನ್ನು ಲಂಡನ್ಗೆ ಕರೆದುಕೊಂಡು ಹೋಗಿ ಸೆಲೆಬ್ರೇಟ್ ಮಾಡಬೇಕು ಎನ್ನುವ ಕನಸನ್ನು ಅಮಿತಾಭ್ ಕಂಡಿದ್ದರು. ಈ ವಿಚಾರ ಅಮಿತಾಭ್ ತಂದೆ ಹರಿವಂಶ್ ರೈ ಬಚನ್ಗೆ ತಿಳಿಯಿತು. ಆಗ ಅವರು ಹೇಳಿದ್ದು ಒಂದೇ ಮಾತು. ‘ನೀವು ವಿದೇಶಕ್ಕೆ ಹೋಗುವುದಾದರೆ ಮೊದಲು ಮದುವೆ ಆಗಿ. ಆ ನಂತರ ವಿದೇಶಕ್ಕೆ ಹೋಗೋಕೆ ನನ್ನ ಅಭ್ಯಂತರವಿಲ್ಲ’ ಎಂದಿದ್ದರು.
ಅಂತೆಯೇ 1973ರಲ್ಲಿ ಅಮಿತಾಭ್-ಜಯಾ ಮದುವೆ ಆದರು. ನಂತರ ಜಯಾ ಹಾಗೂ ಅಮಿತಾಭ್ ಅಭಿಮಾನ್, ಚುಪ್ಚುಪ್ಕೆ, ಶೋಲೆ, ಕಭಿ ಖುಷಿ ಕಭಿ ಗಂ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು.
ಇದನ್ನೂ ಓದಿ: 2 ಕೋಟಿ ರೂ. ದೇಣಿಗೆ ನೀಡಿ, ಮಕ್ಕಳ ದತ್ತು ಪಡೆದು, ನೂರಾರು ರೈತರ ಸಾಲ ತೀರಿಸಿದ ಅಮಿತಾಭ್ಗೆ ಯಾಕಿಷ್ಟು ಕೆಟ್ಟ ಕಮೆಂಟ್?
‘ನಾನು ದೇಣಿಗೆ ಕೇಳಲ್ಲ, ಕೊಡ್ತೀನಿ’; ಬೇರೆ ಸ್ಟಾರ್ಗಳಿಗಿಂತ ಭಿನ್ನ ಹೆಜ್ಜೆ ಇಟ್ಟ ಅಮಿತಾಭ್