ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ವಿಚ್ಛೇದನ ವಿಚಾರ ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ತರಿಸಿದೆ. ಇದನ್ನು ಹೇಗೆ ಸ್ವೀಕರಿಸಬೇಕು ಎಂಬುದು ಅಭಿಮಾನಿಗಳಿಗೆ ತಿಳಿಯುತ್ತಿಲ್ಲ. ಅನೇಕರು ಸಮಂತಾ ಅವರದ್ದೇ ತಪ್ಪು ಎಂದು ದೂರೋಕೆ ಪ್ರಾರಂಭಿಸಿದ್ದಾರೆ. ಸಮಂತಾ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ವಿಚ್ಛೇದನ ವಿಚಾರ ಹುಟ್ಟಿಕೊಂಡಿತು ಎಂದು ದೂರುತ್ತಿದ್ದಾರೆ.
ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿತ್ತು. ಇದರ ಜತೆಗೆ ಸಮಂತಾ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇವೆಲ್ಲದರ ಜತೆಗೆ ಸಮಂತಾ ಅವರ ಬೋಲ್ಡ್ ದೃಶ್ಯಗಳು ಎಲ್ಲರ ಕಣ್ಣು ಕುಕ್ಕಿದ್ದವು. ಸಮಂತಾ ಈ ವೆಬ್ ಸೀರಿಸ್ನಲ್ಲಿ ಅನೇಕ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವು ದೃಶ್ಯಗಳು ಎಷ್ಟು ಮಾದಕವಾಗಿದ್ದವೆಂದರೆ ಸ್ವತಃ ನಿರ್ದೇಶಕರು ಈ ದೃಶ್ಯಗಳಿಗೆ ಕತ್ತರಿ ಹಾಕಿದ್ದರು. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯ್ತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಮದುವೆ ಆದ ನಂತರದಲ್ಲಿ ಹೀರೋಯಿನ್ಗಳು ಬೋಲ್ಡ್ ಆಗಿ ತೆರೆಮೇಲೆ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಕುಟುಂಬದ ಹಿರಿಯರೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ, ಸಮಂತಾ ಇದಕ್ಕೆಲ್ಲ ಕೇರ್ ಮಾಡದೇ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ವೃತ್ತಿ ಜೀವನದ ದೃಷ್ಟಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ಬಹಳ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಅವರು ವೆಬ್ ಸೀರಿಸ್ ಒಪ್ಪಿಕೊಂಡಿದ್ದರು. ಇದಕ್ಕೆ ಕುಟುಂಬದವರ ವಿರೋಧವಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ವಿಚಾರವೇ ಈಗ ಡಿವೋರ್ಸ್ವರೆಗೆ ತಂದು ನಿಲ್ಲಿಸಿತು ಎನ್ನುತ್ತಿವೆ ಮೂಲಗಳು.
ನಾಗ ಚೈತನ್ಯ ಕೂಡ ಚಿತ್ರರಂಗದಲ್ಲೇ ಇರುವವರು. ನಾಗ ಚೈತನ್ಯ ಹಾಗೂ ಸಮಂತಾದು ಪ್ರೇಮ ವಿವಾಹ. ಆದರೆ, ಈ ರೀತಿಯ ಪಾತ್ರಗಳನ್ನು ಮಾಡೋಕೆ ಸಮಂತಾಗೆ ನಾಗ ಚೈತನ್ಯ ಕಡೆಯಿಂದ ಸರಿಯಾದ ಬೆಂಬಲ ಸಿಕ್ಕಿಲ್ಲ. ಈ ಕಾರಣಕ್ಕೆ ಸಮಂತಾ ವೃತ್ತಿ ಜೀವನವನ್ನು ಏಕಾಂಗಿಯಾಗಿ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ದಂಪತಿ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ‘ನೀವು ಸಾಯಿ ಪಲ್ಲವಿಯನ್ನು ಮದುವೆಯಾಗಿ, ಅವರೇ ಸರಿಯಾದ ಜೋಡಿ’; ವಿಚ್ಛೇದನದ ದಿನವೇ ನಾಗ ಚೈತನ್ಯಗೆ ಹೊಸ ಸಲಹೆ
Samantha Naga Chaitanya Divorce: ಸಮಂತಾ-ನಾಗ ಚೈತನ್ಯ ಡಿವೋರ್ಸ್; ಸ್ಟಾರ್ ಜೋಡಿಯ ದಾಂಪತ್ಯ ಅಂತ್ಯ
Published On - 5:00 pm, Sat, 2 October 21