ನಟಿ ಆಲಿಯಾ ಭಟ್ (Alia Bhatt) ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ. ಮದುವೆ ಆಗಿ ಎರಡೂವರೆ ತಿಂಗಳಿಗೆ ತಾವು ತಾಯಿ ಆಗುತ್ತಿರುವ ಬಗ್ಗೆ ಆಲಿಯಾ ಭಟ್ ಘೋಷಣೆ ಮಾಡಿದರು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆಗಳನ್ನು ಕೂಡ ಎದುರಿಸಿದರು. ಇದರ ಬೆನ್ನಲ್ಲೇ ಆಲಿಯಾ ಭಟ್ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು. ಇದಕ್ಕೆ ಆಲಿಯಾ ತಿರುಗೇಟು ನೀಡಿದ್ದರು. ಜತೆಗೆ ಒಂದು ಪ್ರಾಮಿಸ್ ಕೂಡ ಮಾಡಿದ್ದರು. ಈಗ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಹಾಕಿದ್ದಾರೆ.
ಆಲಿಯಾ ಭಟ್ ಅವರು ಪ್ರೆಗ್ನೆಂಟ್ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಅನೇಕ ಮಾಧ್ಯಮಗಳು ನಾನಾ ರೀತಿಯಲ್ಲಿ ವರದಿ ಬಿತ್ತರ ಮಾಡಿದವು. ಇದರಲ್ಲಿ ಆಲಿಯಾಗೆ ಅತಿ ಹೆಚ್ಚು ಕೋಪ ತರಿಸಿದ್ದು ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕಟವಾದ ಸುದ್ದಿ. ‘ಆಲಿಯಾ ಭಟ್ ಪ್ರೆಗ್ನೆಂಟ್ ಆದ ಕಾರಣ ಸಿನಿಮಾ ಕೆಲಸಗಳು ವಿಳಂಬವಾಗಲಿದೆ. ಆಲಿಯಾಗೆ ಮಗು ಜನಿಸುವವರೆಗೂ ನಿರ್ಮಾಪಕರು ಕಾಯಬೇಕಿದೆ’ ಎಂದು ವರದಿ ಆದವು. ಇದಕ್ಕೆ ಆಲಿಯಾ ತಿರುಗೇಟು ನೀಡಿದ್ದರು. ತಾವು ಒಪ್ಪಿಕೊಂಡ ಎಲ್ಲಾ ಸಿನಿಮಾಗಳ ಕೆಲಸವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಈಗ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಆಲಿಯಾ ಕೈಯಲ್ಲಿ ಸದ್ಯ ನಾಲ್ಕು ಪ್ರಾಜೆಕ್ಟ್ಗಳಿವೆ. ಅವರ ನಟನೆಯ ‘ಡಾರ್ಲಿಂಗ್ಸ್’ ಸಿನಿಮಾ ತೆರೆಗೆ ಬರೋಕೆ ರೆಡಿ ಇದೆ. ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ‘ಬ್ರಹ್ಮಾಸ್ತ್ರ’ ಸಿನಿಮಾ ಕೆಲಸಗಳು ಪೂರ್ಣಗೊಂಡಿದ್ದು, ಸೆಪ್ಟೆಂಬರ್ನಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಅವರು ಒಪ್ಪಿಕೊಂಡಿರುವ ಹಾಲಿವುಡ್ ಚಿತ್ರ ‘ಹಾರ್ಟ್ ಆಫ್ ಸ್ಟೋನ್’ನ ಕೆಲಸಗಳು ಬಾಕಿ ಇದ್ದವು. ಈಗ ಈ ಚಿತ್ರದ ಶೂಟಿಂಗ್ಅನ್ನು ಆಲಿಯಾ ಭಟ್ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಶೂಟಿಂಗ್ಗಾಗಿ ಅವರು ಲಂಡನ್ಗೆ ತೆರಳಿದ್ದಾರೆ.
ಇದನ್ನೂ ಓದಿ: ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್
ಕರಣ್ ಜೋಹರ್ ಅವರು ನಿರ್ದೇಶನ ಮಾಡುತ್ತಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಆಲಿಯಾ ಹಾಗೂ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಕೊನೆಯ ಹಂತದಲ್ಲಿವೆ. ಈ ಸಿನಿಮಾದ ಚಿತ್ರೀಕರಣ ಕೂಡ ಶೀಘ್ರವೇ ಪೂರ್ಣಗೊಳ್ಳಲಿದೆ. ಆಲಿಯಾ ಭಟ್ ಅವರ ಕಮಿಟ್ಮೆಂಟ್ಗೆ ಫ್ಯಾನ್ಸ್ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.