
ಬಹುನಿರೀಕ್ಷಿತ ‘ಅವತಾರ್ 2’ (Avatar 2) ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಜಗತ್ತಿನ ಹಲವು ಭಾಷೆಗಳಿಗೆ ಡಬ್ ಆಗಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಬಗ್ಗೆ ಇಡೀ ಪ್ರಪಂಚದ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಕನ್ನಡಿಗರಿಗೆ ಮಾತ್ರ ನಿರಾಸೆ ಆಗಿತ್ತು. ‘ಅವತಾರ್ 2’ (Avatar: The Way Of Water) ಚಿತ್ರದ ಕನ್ನಡ ವರ್ಷನ್ ರಿಲೀಸ್ ಮಾಡುವ ನಿರ್ಧಾರದಿಂದ ನಿರ್ಮಾಪಕರು ಹಿಂದೆ ಸರಿದಿದ್ದರು. ಅದಕ್ಕಾಗಿ ಕನ್ನಡಿಗರು ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ಕನ್ನಡ ಪ್ರೇಕ್ಷಕರ ಒತ್ತಾಯಕ್ಕೆ ‘ಅವತಾರ್ 2’ ನಿರ್ಮಾಪಕರು ಮಣಿದಿದ್ದಾರೆ. ಕನ್ನಡದಲ್ಲೂ (Avatar 2 in Kannada) ಈ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಕನ್ನಡ ವರ್ಷನ್ ಟ್ರೇಲರ್ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಕನ್ನಡದಲ್ಲಿ ‘ಅವತಾರ್ 2’ ರಿಲೀಸ್ ಮಾಡಬೇಕು ಎಂಬ ಪ್ಲ್ಯಾನ್ ಆರಂಭದಲ್ಲಿ ಇತ್ತು. ಅದಕ್ಕಾಗಿ ಚಿಕ್ಕ ಟೀಸರ್ ಅನ್ನು ಕನ್ನಡ ವರ್ಷನ್ನಲ್ಲೂ ರಿಲೀಸ್ ಮಾಡಲಾಗಿತ್ತು. ಆದರೆ ಟ್ರೇಲರ್ ಬಿಡುಗಡೆ ಸಮಯದಲ್ಲಿ ನಿರ್ಮಾಪಕರ ಮನಸ್ಸು ಬದಲಾಯಿತು. ಕೇವಲ ಇಂಗ್ಲಿಷ್, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಟ್ರೇಲರ್ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳಲಾಯಿತು. ಆಗ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಯಿತು.
ಕನ್ನಡಿಗರು ಮೂಲ ಭಾಷೆಯಲ್ಲಿಯೇ ಎಲ್ಲ ಸಿನಿಮಾವನ್ನು ನೋಡುತ್ತಾರೆ ಎಂಬ ವಾದ ಇದೆ. ಅದನ್ನೇ ನಂಬಿಕೊಂಡು ಪರಭಾಷೆಯ ಕೆಲವು ನಿರ್ಮಾಣ ಸಂಸ್ಥೆಗಳು ತಮ್ಮ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವುದಿಲ್ಲ. ಮಾರ್ಕೆಟ್ ದೃಷ್ಟಿಯಿಂದ ‘ಅವತಾರ್ 2’ ಚಿತ್ರದ ನಿರ್ಮಾಪಕರು ಕೂಡ ಹಾಗೆಯೇ ಮಾಡಿದ್ದರೆ ಅದು ಕನ್ನಡದ ಪ್ರೇಕ್ಷಕರಿಗೆ ತೋರಿದ ಅಗೌರವ ಆಗುತ್ತದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಅವತಾರ್ 2’ ಚಿತ್ರದ ನಿರ್ಮಾಣ ಸಂಸ್ಥೆಯಾದ ‘20th Century Studios’ ಈಗ ಕನ್ನಡದಲ್ಲೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಡಿಸೆಂಬರ್ 16ರಂದು ಈ ಸಿನಿಮಾದ ಕನ್ನಡ ವರ್ಷನ್ ಕೂಡ ರಿಲೀಸ್ ಆಗಲಿದೆ. ಯೂಟ್ಯೂಬ್ನಲ್ಲಿ ಕನ್ನಡ ಟ್ರೇಲರ್ ನೋಡಿದ ಪ್ರೇಕ್ಷಕರು ನಿರ್ಮಾಣ ಸಂಸ್ಥೆಗೆ ಧನ್ಯವಾದ ತಿಳಿಸುತ್ತಿದ್ದಾರೆ.
ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಆ್ಯಕ್ಷನ್-ಕಟ್ ಹೇಳಿದ್ದಾರೆ. 2000 ಸಾವಿರ ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:32 am, Fri, 11 November 22