
ಭಾರತದ ಸಿನಿಮಾಗಳು ಸಾವಿರ ಕೋಟಿ ಕಲೆಕ್ಷನ್ (Collection) ಮಾಡುವುದು ಹೊಸತಲ್ಲ. ಆದರೆ ಹೀಗೆ ಭಾರತದ ಸಿನಿಮಾ ಒಂದು ಸಾವಿರ ಕೋಟಿ ಕಲೆಕ್ಷನ್ ಮಾಡುವುದು ಸಾಧನೆಯೆಂದೇ ಪರಿಗಣಿಸಲಾಗಿದೆ. ಭಾರತದ ಸಿನಿಮಾ ಒಂದು ಸಾವಿರ ಕೋಟಿ ಕಲೆಕ್ಷನ್ ದಾಟಲು ಕನಿಷ್ಟ ತಿಂಗಳಾದರೂ ಸಮಯ ಬೇಕು. ಆದರೆ ಇತ್ತೀಚೆಗೆ ಬಿಡುಗಡೆ ಆದ ಹಾಲಿವುಡ್ ಸಿನಿಮಾ ಒಂದು ಬಿಡುಗಡೆ ಆದ ಕೇವಲ ಐದು ದಿನಕ್ಕೆ ಸುಮಾರು 2900 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಒಂದು ವಾರಕ್ಕೆ ಸಿನಿಮಾದ ಕಲೆಕ್ಷನ್ 3200 ಕೋಟಿ ದಾಟಿದೆ.
‘ಜುರಾಸಿಕ್ ವರ್ಲ್ಡ್: ರೀ ಬರ್ತ್’ ಸಿನಿಮಾ ಜುಲೈ 2 ರಂದು ಅಮೆರಿಕ, ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಯ್ತು. ಸ್ಕಾರ್ಲೆಟ್ ಜೋನ್ಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಬಿಡುಗಡೆ ಆದ ಕೇವಲ ಐದು ದಿನಕ್ಕೆ 334.3 ಮಿಲಿಯನ್ ಡಾಲರ್ ಗಳಿಕೆ ಮಾಡಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಸಿನಿಮಾದ ಐದು ದಿನದ ಗಳಿಕೆ 2828 ಕೋಟಿ ರೂಪಾಯಿಗಳು. ಸಿನಿಮಾ ಬಿಡುಗಡೆ ಆಗಿ ಇಂದಿಗೆ ಏಳು ದಿನಗಳಾಗಿದ್ದು, ಸಿನಿಮಾದ ಕಲೆಕ್ಷನ್ 3200 ಕೋಟಿ ರೂಪಾಯಿ ದಾಟಿದೆ.
ಭಾರತದಲ್ಲಿ ಸಹ ಈ ಸಿನಿಮಾ ಒಳ್ಳೆ ಗಳಿಕೆಯನ್ನೇ ಮಾಡಿದೆ. ಬೆಂಗಳೂರು, ಮುಂಬೈ, ದೆಹಲಿ ಇನ್ನಿತರೆ ಮೆಟ್ರೋ ಸಿಟಿಗಳಲ್ಲಿ ಹೆಚ್ಚಾಗಿ ಬಿಡುಗಡೆ ಆಗಿರುವ ‘ಜುರಾಸಿಕ್ ರೀಬರ್ತ್’ ಸಿನಿಮಾ ಐದು ದಿನಗಳಲ್ಲಿ 47.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾದ ಕಲೆಕ್ಷನ್ ಸೋಮವಾರದಂದು ತುಸು ಕಡಿಮೆ ಆಗಿದ್ದು, ಮತ್ತೆ ವೀಕೆಂಡ್ಗೆ ಹೆಚ್ಚಾಗುವ ನಿರೀಕ್ಷೆ ಇದೆ. ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾದ ಪ್ರಬಲ ಪೈಪೋಟಿಯ ನಡುವೆಯೂ ಈ ಸಿನಿಮಾ ಗಳಿಸಿರುವ ಮೊತ್ತ ಸಾಧಾರಣವಾದುದಲ್ಲ.
ಇದನ್ನೂ ಓದಿ:‘ಮಿಷನ್ ಇಂಪಾಸಿಬಲ್’ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಎಷ್ಟು ಸಾವಿರ ಕೋಟಿ?
‘ಬ್ಲಾಕ್ ವಿಡೊ’ ಖ್ಯಾತಿಯ ಸ್ಕಾರ್ಲೆಟ್ ಜಾನ್ಸನ್ ‘ಜುರಾಸಿಕ್: ರೀಬರ್ತ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರೊಟ್ಟಿಗೆ ಮಹರ್ಶೆಲಾ ಅಲಿ, ಜಾನತನ್ ಬೇಯ್ಲಿ ಇನ್ನೂ ಕೆಲವು ಖ್ಯಾತ ನಟರು ನಟಿಸಿದ್ದಾರೆ. ಸಿನಿಮಾ ಅನ್ನು ಗ್ಯಾರೆತ್ ಎಡ್ವರ್ಡ್ಸ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ‘ಗಾಡ್ಜಿಲಾ’, ‘ಮಾನ್ಸ್ಟರ್ಸ್’, ‘ರೋಗ್ ಒನ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಯೂನಿವರ್ಸಲ್ ಪಕ್ಚರ್ಸ್ ಮತ್ತು ಆಂಬಿಲ್ ಎಂಟರ್ಟೈನ್ಮೆಂಟ್ ಈ ಸಿನಿಮಾ ನಿರ್ಮಾಣ ಮಾಡಿದೆ. ‘ಜುರಾಸಿಕ್’ ಸಿನಿಮಾ ಸರಣಿಯಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗುವ ಸೂಚನೆ ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ