
ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ (Salaar Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಈ ಚಿತ್ರದ ಬಿಡುಗಡೆ ದಿನಾಂಕ (Salaar Release Date) ಮುಂದೆ ಹೋಗಿದೆ ಎಂಬ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸುದ್ದಿ ಹರಿದಾಡಲು ಆರಂಭಿಸಿತ್ತು. ಹಾಗಿದ್ದರೂ ಕೂಡ ಈ ಚಿತ್ರತಂಡದವರು ಮೌನವಾಗಿದ್ದರು. ಅಂತೂ ಇಂತೂ ಈಗ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ಕಡೆಯಿಂದ ಆ ಬಗ್ಗೆ ಪ್ರತಿಕ್ರಿಯೆ ಸಿಕ್ಕಿದೆ. ‘ಸಲಾರ್’ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿರುವುದರ ಬಗ್ಗೆ ನಿರ್ಮಾಪಕರೇ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಕಾರಣಾಂತರಗಳಿಂದ ‘ಸಲಾರ್’ ಸಿನಿಮಾದ ಬಿಡುಗಡೆ ವಿಳಂಬ ಆಗುತ್ತಿದೆ ಎಂದು ತಿಳಿಸಲಾಗಿದೆ. ಇದು ಒಂದು ವರ್ಗದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸಕುಮಾರನ್ ಅವರಂತಹ ಘಟಾನುಘಟಿ ಕಲಾವಿದರು ಕೂಡ ಈ ಚಿತ್ರದಲ್ಲಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದಷ್ಟು ಬೇಗ ‘ಸಲಾರ್’ ನೋಡಬೇಕು ಎಂಬುದು ಫ್ಯಾನ್ಸ್ ಆಸೆ ಆಗಿತ್ತು. ಆದರೆ ರಿಲೀಸ್ ದಿನಾಂಕ ಮುಂದೂಡಿಕೆ ಆಗಿದ್ದು, ಇನ್ನೂ ಒಂದಷ್ಟು ತಿಂಗಳು ಕಾಯುವುದು ಅನಿವಾರ್ಯ ಆಗಿದೆ.
‘ಸಲಾರ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಹಾಗಾಗಿ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಅದಕ್ಕೆ ಸಹಜವಾಗಿಯೇ ಸಮಯ ಹಿಡಿಯುತ್ತಿದೆ. ಆ ಕಾರಣದಿಂದ ಅಂದುಕೊಂಡ ದಿನಾಂಕದಲ್ಲಿ ‘ಸಲಾರ್’ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ರಿಲೀಸ್ ದಿನಾಂಕ ಮುಂದೂಡಲಾಗಿದೆ.
ಇದನ್ನೂ ಓದಿ: ‘ಸಲಾರ್’ ಬಿಡುಗಡೆ ಮುಂದಕ್ಕೆ ಹೋಗಿದ್ದಕ್ಕೆ ರಣಬೀರ್ ಕಪೂರ್ಗೆ ಲಾಭ; ಏನಿದು ಲೆಕ್ಕಾಚಾರ?
ಹಾಗಾದರೆ, ‘ಸಲಾರ್’ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವುದಾಗಿ ‘ಹೊಂಬಾಳೆ ಫಿಲ್ಮ್ಸ್’ ಹೇಳಿದೆ. ಈ ಸಿನಿಮಾ ಎರಡು ಪಾರ್ಟ್ನಲ್ಲಿ ಮೂಡಿಬರಲಿದೆ. ಮೊದಲ ಪಾರ್ಟ್ಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಹೊಸ ರಿಲೀಸ್ ಡೇಟ್ ಘೋಷಣೆ ಆಗಲಿ ಎಂದು ಪ್ರಭಾಸ್ ಅಭಿಮಾನಿಗಳು ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 am, Wed, 13 September 23