
ಭಾರತದ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್ಗೆ (Hollywood) ಪದಾರ್ಪಣೆ ಮಾಡಿ, ಅಲ್ಲಿನ ಸ್ಟಾರ್ ನಟ-ನಟಿಯರೊಡನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್, ಅಮಿತಾಬ್ ಬಚ್ಚನ್, ಧನುಶ್ ಇನ್ನೂ ಕೆಲವರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ನಿರ್ದೇಶಕರು ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿದ್ದಿಲ್ಲ. ಭಾರತೀಯ ಮೂಲದ ಕೆಲವೇ ಕೆಲವು ಸಿನಿಮಾ ನಿರ್ದೇಶಕರುಗಳು ಹಾಲಿವುಡ್ನಲ್ಲಿದ್ದಾರೆ. ಇದೀಗ ಭಾರತೀಯ ಮೂಲದ ನಿರ್ದೇಶಕರೊಬ್ಬರು ಹಾಲಿವುಡ್ನ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ.
‘ಮಿಷನ್ ಇಂಪಾಸಿಬಲ್’, ‘ಟಾಪ್ ಗನ್’ ಸೇರಿದಂತೆ ಹಲವು ವಿಶ್ವಿ ವಿಖ್ಯಾತ ಆಕ್ಷನ್ ಸಿನಿಮಾ ಸರಣಿಗಳಲ್ಲಿ ನಟಿಸಿರುವ ಟಾಮ್ ಕ್ರೂಸ್, ವಿಶ್ವದ ಟಾಪ್ ನಟರಲ್ಲಿ ಪ್ರಮುಖರು. ವಿಶ್ವದಲ್ಲಿ ಅತಿ ಹೆಚ್ಚು ಪರಿಚಿತ ನಟ ಸಹ ಹೌದು. ಇದೀಗ ಟಾಮ್ ಕ್ರೂಸ್ ಅವರು ‘ಡೂಪ್ಲಾಂಗರ್’ ಹೆಸರಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಭಾರತೀಯ ಮೂಲದ ನಿರ್ದೇಶಕ. ಅದೂ ತೆಲುಗು ಮೂಲದ ನಿರ್ದೇಶಕ ಎಂಬುದು ಮತ್ತಷ್ಟು ವಿಶೇಷ. ತೆಲುಗು ಮೂಲದ ಅನೀಶ್ ಚಗಂಟಿ ಅವರು ಟಾಮ್ ಕ್ರೂಸ್ ಅವರ ಮುಂದಿನ ಸಿನಿಮಾ ನಿರ್ದೇಶಿಸಲಿದ್ದಾರೆ. ಅನೀಶ್ ನಿರ್ದೇಶಿಸಲಿರುವ ಈ ಸಿನಿಮಾ ಸಸ್ಪನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಕತೆಯನ್ನೂ ಸಹ ಒಳಗೊಂಡಿದ್ದು, ಟಾಮ್ ಕ್ರೂಸ್ ಸಹ ಆಸಕ್ತಿ ವ್ಯಕ್ತಪಡಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಹಾಲಿವುಡ್ ಮಂದಿಯ ಎದುರು ಹೇಗೆ ಮಾತಾಡಿದ್ರು ನೋಡಿ ಯಶ್
ಅನೀಶ್ ಅವರ ಪೋಷಕರು ಅವಿಭಜಿತ ಆಂಧ್ರ ಪ್ರದೇಶದವರು. 1980 ರಲ್ಲಿ ಅವರು ಅಮೆರಿಕಕ್ಕೆ ವಲಸೆ ಹೋದರು. ಅನೀಶ್ ಚಗಂಟಿಗೆ ಆರಂಭದಿಂದಲೂ ಸಿನಿಮಾಗಳ ಮೇಲೆ ಅಪಾರ ಪ್ರೀತಿ ಇತ್ತು. ಅವರು ಹಲವಾರು ಶಾರ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ನಿರ್ಮಾಣ ಸಹ ಮಾಡಿದ್ದಾರೆ. ಅವುಗಳಲ್ಲಿ ಹಲವು ಶಾರ್ಟ್ ಸಿನಿಮಾಗಳಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳು ಸಹ ಲಭಿಸಿವೆ.
2018 ರಲ್ಲಿ ಬಿಡುಗಡೆ ಆದ ‘ಸರ್ಚಿಂಗ್’ ಅನೀಶ್ ಅವರ ಮೊದಲ ಸಿನಿಮಾ. ತಂದೆಯೊಬ್ಬ ಕಾಣೆಯಾದ ಮಗಳನ್ನು ಕೇವಲ ಮೊಬೈಲ್, ಇಂಟರ್ನೆಟ್, ಸೋಷಿಯಲ್ ಮೀಡಿಯಾ ಬಳಸಿ ಹುಡುಕುವ ಕತೆಯನ್ನು ಆ ಸಿನಿಮಾ ಒಳಗೊಂಡಿದ್ದು, ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಒಟಿಟಿಯಲ್ಲಿ ಈಗಲೂ ಸಹ ದೊಡ್ಡ ಸಂಖ್ಯೆಯ ವೀಕ್ಷಕರು ಆ ಸಿನಿಮಾಕ್ಕೆ ಇದ್ದಾರೆ. ಆ ಬಳಿಕ ‘ರನ್’ ಹೆಸರಿನ ಮತ್ತೊಂದು ಥ್ರಿಲ್ಲರ್ ಸಿನಿಮಾವನ್ನು ಅನೀಶ್ ನಿರ್ದೇಶಿಸಿದ್ದರು. 2023 ರಲ್ಲಿ ‘ಮಿಸ್ಸಿಂಗ್’ ಹೆಸರಿನ ಸಿನಿಮಾವನ್ನು ಅನೀಶ್ ನಿರ್ದೇಶಿಸಿದರು. ಇದೂ ಸಹ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ