
ದಳಪತಿ ವಿಜಯ್ (Thalapathy Vijay) ಈಗ ಕೇವಲ ಸ್ಟಾರ್ ನಟ ಮಾತ್ರವಲ್ಲ, ತಮಿಳುನಾಡು ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ರಾಜಕಾರಣಿ. ‘ಜನ ನಾಯಗನ್’ ವಿಜಯ್ ಕಡೆಯ ಸಿನಿಮಾ ಎನ್ನಲಾಗುತ್ತಿದೆ. ತಮಿಳುನಾಡಿನಲ್ಲಿ ಚುನಾವಣೆಗಳು ಪ್ರಾರಂಭವಾದಾಗಿನಿಂದಲೂ ಸಿನಿಮಾ ಮತ್ತು ರಾಜಕೀಯ ಪರಸ್ಪರವನ್ನು ಅವಲಂಭಿಸಿವೆ. ಈಗ ‘ಜನ ನಾಯಗನ್’ ಸಿನಿಮಾ ಮೂಲಕ ವಿಜಯ್ ಸಹ ತಮ್ಮ ರಾಜಕೀಯ ಅಜೆಂಡಾ ಅನ್ನು ಪ್ರಚಾರ ಮಾಡಲು ಮುಂದಾಗಿದ್ದಾರೆ. ‘ಜನ ನಾಯಗನ್’ ಬಿಡುಗಡೆ ಆಗುತ್ತಿರುವ ದಿನವೇ ತಮಿಳಿನ ‘ಪರಾಶಕ್ತಿ’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ವಿಜಯ್ ಅವರ ರಾಜಕೀಯ ಎದುರಾಳಿಗಳು ವಿಜಯ್ ಅವರ ‘ಸಿನಿಮಾ ರಾಜಕೀಯಕ್ಕೆ’ ಸಿನಿಮಾ ಮೂಲಕವೇ ಅಡ್ಡಗಾಲು ಹಾಕಲೆಂದು ಮುಂದಾಗಿ, ‘ಪರಾಶಕ್ತಿ’ ಸಿನಿಮಾವನ್ನು ಅದೇ ದಿನ ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ನಿಜವೇ? ಈ ಪ್ರಶ್ನೆಗೆ ‘ಪರಾಶಕ್ತಿ’ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ಉತ್ತರ ನೀಡಿದ್ದಾರೆ.
‘ಪರಾಶಕ್ತಿ’ ಸಿನಿಮಾ ನಿರ್ಮಾಣ ಮಾಡಿರುವ ಆಕಾಶ್ ಭಾಸ್ಕರನ್, ಆಡಳಿತಾರೂಢ ಡಿಎಂಕೆ ನಾಯಕರಿಗೆ ಬಲು ಆಪ್ತರು ಮತ್ತು ಹತ್ತಿರದ ಸಂಬಂಧಿ ಸಹ. ದಳಪತಿ ವಿಜಯ್ ಅವರ ಪ್ರಮುಖ ರಾಜಕೀಯ ಎದುರಾಳಿ ಡಿಎಂಕೆ ಆಗಿದೆ. ಇದೇ ಕಾರಣಕ್ಕೆ ತಮ್ಮ ಎದುರಾಳಿಯಾದ ವಿಜಯ್ ಅವರ ಸಿನಿಮಾಕ್ಕೆ ತಮ್ಮ ಸಿನಿಮಾವನ್ನು ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡುತ್ತಿದ್ದಾರೆ ಆಕಾಶ್ ಭಾಸ್ಕರನ್ ಎಂಬ ಚರ್ಚೆ ತಮಿಳುನಾಡಿನಲ್ಲಿ ಹರಿದಾಡುತ್ತಿದೆ. ಇದಕ್ಕೆ ‘ಪರಾಶಕ್ತಿ’ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ಉತ್ತರ ನೀಡಿದ್ದಾರೆ.
‘ನಾವು ಮೊದಲು 2025ರ ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದೆವು, ಆದರೆ ‘ಜನ ನಾಯಗನ್’ ಸಿನಿಮಾ ದೀಪಾವಳಿಗೆ ಬಿಡುಗಡೆ ಆಗುತ್ತಿದೆ ಎಂಬ ವಿಷಯ ಗೊತ್ತಾಗಿ, ನಾವು ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡೋಣ ಎಂದು ಸುಮ್ಮನಾದೆವು, ನಮ್ಮ ಸಿನಿಮಾ ಕೆಲಸಗಳನ್ನು ಸಹ ಅದಕ್ಕೆ ತಕ್ಕಂತೆ ಹೊಂದಿಸಿಕೊಂಡೆವು. ಆದರೆ ಬಳಿಕ ‘ಜನ ನಾಯಗನ್’ ಸಿನಿಮಾ ಬಿಡುಗಡೆಯನ್ನು ಸಂಕ್ರಾಂತಿಗೆ ಮುಂದೂಡಲಾಯ್ತು’ ಎಂದಿದ್ದಾರೆ.
ಇದನ್ನೂ ಓದಿ:ಎಲ್ಲರಿಗೂ ಸ್ವಂತ ಮನೆ, ಕಾರು, ಬೈಕು: ದಳಪತಿ ವಿಜಯ್ ಭರವಸೆ
‘ಜನ ನಾಯಗನ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ ಎಂದು ಗೊತ್ತಾದಾಗ ಮೊದಲು ನಾನು ನಿರ್ಮಾಪಕ ಆಕಾಶ್ ಅವರ ಬಳಿ, ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಮುಂದೂಡಲು ಸಾಧ್ಯವೇ ಎಂದು ಕೇಳಿದೆ. ಆದರೆ ಅದು ಸಾಧ್ಯವಿರಲಿಲ್ಲ. ಸಿನಿಮಾ ಮೇಲೆ ಹೂಡಿಕೆ ಮಾಡಿರುವವರಿಗೆ ಬಿಡುಗಡೆ ದಿನಾಂಕ ಹೇಳಿ ಆಗಿತ್ತು. ಅದಕ್ಕೆ ತಕ್ಕಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಅಲ್ಲದೆ ಈಗ ನಾವು ಬಿಡುಗಡೆ ಮಾಡಲಿಲ್ಲವೆಂದಾದರೆ ಮತ್ತೆ ಏಪ್ರಿಲ್ ವರೆಗೆ ಬಿಡುಗಡೆ ಮಾಡಲು ಆಗುತ್ತಿರಲಿಲ್ಲ ಹಾಗಾಗಿ ಧೈರ್ಯ ಮಾಡಿ ಬಿಡುಗಡೆಗೆ ಮುಂದಾದೆವು’ ಎಂದಿದ್ದಾರೆ ಶಿವಕಾರ್ತಿಕೇಯನ್.
‘ನಾನು ವಿಜಯ್ ಅವರ ಮ್ಯಾನೇಜರ್ ಜಗದೀಶ್ ಬಳಿಯೂ ಮಾತನಾಡಿದೆ. ಎರಡೂ ಸಿನಿಮಾಗಳು ಒಟ್ಟಿಗೆ ಬರುತ್ತಿವೆ, ಈ ಬಗ್ಗೆ ವಿಜಯ್ ಅವರ ಬಳಿ ಮಾತನಾಡಿ ಎಂದು ಮನವಿ ಮಾಡಿದೆ. ಅದಕ್ಕೆ ವಿಜಯ್ ಅವರು ಸಂಕ್ರಾಂತಿ ಸಮಯ ಆದ್ದರಿಂದ ಎರಡೂ ಸಿನಿಮಾಗಳಿಗೆ ಸಾಕಷ್ಟು ಥಿಯೇಟರ್ ಸ್ಪೇಸ್ ಸಿಗುತ್ತದೆ. ಯೋಚನೆ ಬೇಡ ಆರಾಮವಾಗಿ ಬಿಡುಗಡೆ ಮಾಡುವಂತೆ ವಿಜಯ್ ಅವರು ಹೇಳಿದ್ದಾಗಿ ಜಗದೀಶ್ ಹೇಳಿದರು ಎಂದಿದ್ದಾರೆ ಶಿವಕಾರ್ತಿಕೇಯನ್. ಅಲ್ಲದೆ, ‘ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಅನ್ನು ಎಲ್ಲರೂ ಎಂಜಾಯ್ ಮಾಡೋಣ ಎಂದು ಸಹ ಶಿವಕಾರ್ತಿಕೇಯನ್ ಹೇಳಿದ್ದಾರೆ. ‘ಜನ ನಾಯಗನ್’ ಸಿನಿಮಾ ಜನವರಿ 9ಕ್ಕೆ ಬಿಡುಗಡೆ ಆದರೆ, ‘ಪರಾಶಕ್ತಿ’ ಸಿನಿಮಾ ಜನವರಿ 10ಕ್ಕೆ ತೆರೆಗೆ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ